Sunday, November 30, 2008

ಪವಾಡದ ಬೀಡಲ್ಲ, ಯೋಗಿ ಕಟ್ಟಿದ ನಾಡು!

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ನಂತರ ಶರಣರು ಗುಂಪುಗುಂಪಾಗಿ ಚದುರಿ ಹೋದರು. ಹಾಗೆ ಚದುರಿದ ಗುಂಪುಗಳಲ್ಲಿ ಕೆಲವು ಶಿವಗಂಗೆ, ಸಿದ್ಧಗಂಗೆ, ಗೂಳೂರು, ಗುಬ್ಬಿಯತ್ತ ಮುಖ ಮಾಡಿದವು. ಶರಣ ಧರ್ಮ ಬಿತ್ತರಿಸುವ ಪ್ರಯತ್ನ ನಡೆಯಿತು. ಆ ಕ್ರಾಂತಿಯ ಪ್ರತಿಫಲವೇ ಸಿದ್ಧಗಂಗೆ ಉಗಮಕ್ಕೆ ಪ್ರೇರಣೆ ಎನ್ನುತ್ತಾರೆ.

ಶಿಲೆಯೊಳಗಣ ಪಾವಕದಂತೆ, ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶಬ್ದದಂತೆ
ಗುಹೇಶ್ವರಾ, ನಿಮ್ಮ ಶರಣರ ಸಂಬಂಧ...
ಎಂಬ ಅಲ್ಲಮಪ್ರಭುವಿನ ವಚನದ ಸಾಲುಗಳನ್ನು ಕೇಳಿದಾಗಲೆಲ್ಲ ಶ್ರೀ ಶಿವಕುಮಾರ ಸ್ವಾಮೀಜಿ ನೆನಪಾಗುತ್ತಾರೆ. ಅವರು ಕಟ್ಟಿ ಬೆಳೆಸುತ್ತಿರುವ ಸಿದ್ಧಗಂಗಾ ಕ್ಷೇತ್ರ ಕಣ್ಮುಂದೆ ಬರುತ್ತದೆ.

ಹೌದು, ಬಸವಣ್ಣನವರು ಬೋಸಿದ ತತ್ತ್ವಗಳಿಗೆಲ್ಲ ಜೀವ ತುಂಬುತ್ತಿರುವ ಶ್ರೀ ಶಿವಕುಮಾರ ಸ್ವಾಮಿಗಳು ನೆನಪಾದಾಗಲೆಲ್ಲ, ಅವರ ಕಾಯಕ ಭೂಮಿಯಾದ ಶ್ರೀ ಸಿದ್ಧಗಂಗಾ ಕ್ಷೇತ್ರದ ಚಿತ್ರಣವೂ ಮನದಲ್ಲಿ ಮೂಡುತ್ತದೆ. ಅಂದಹಾಗೆ ಈ ಕ್ಷೇತ್ರಕ್ಕೆ ಭವ್ಯ ಗುರು ಪರಂಪರೆಯಿದೆ. ಶತಮಾನಗಳಷ್ಟು ಹಳೆಯದಾದ ಸುಂದರ ಇತಿಹಾಸವಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಶಿವ ಶಕ್ತಿ ಅಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ.

ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೬೬ ಕಿ.ಮಿ ದೂರ ಸಾಗಿದರೆ ತೂಮಕೂರು ನಗರ ವ್ಯಾಪ್ತಿಗೆ ಒಳಪಟ್ಟ ಶ್ರೀ ಸಿದ್ಧಗಂಗಾ ಕ್ಷೇತ್ರ ಸಿಗುತ್ತದೆ. ಸುಮಾರು ೬೦೦ ವರ್ಷಗಳ ಹಿಂದೆ ಶ್ರೀ ಗೋಸಲ ಸಿದ್ಧೇಶ್ವರರು ಈ ಮಠವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ಹರದನಹಳ್ಳಿಯ ಹದಿನೈದನೆಯ ಪೀಠಾಪತಿಗಳಾದ ಗೋಸಲ ಸಿದ್ಧೇಶ್ವರರು ೧೦೧ ವಿರಕ್ತರೊಂದಿಗೆ ಸಂಚರಿಸುತ್ತಾ ಪ್ರಕೃ ತಿಯ ಮಡಿಲೆನಿಸಿದ ಸಿದ್ಧಗಂಗೆಗೆ ಬಂದರು. ಇಲ್ಲಿನ ಪ್ರಕೃತಿಗೆ ಮನಸೋತು ತುಮಕೂರು, ಗೂಳೂರು ಭಕ್ತರ ನೆರವಿನಿಂದ ಮಠ ಸ್ಥಾಪನೆ ಮಾಡಿದರು ಎಂಬುದು ಇತಿಹಾಸದ ಪುಟಗಳಲ್ಲಿ ಸದಾಖಲಾದ ಸಂಗತಿ. `ಗೋಸುಲ ಸಿದ್ಧೇಶ್ವರರು ತಪಸ್ಸಿನ ಫಲವಾಗಿ ಕಲ್ಲು ಬಂಡೆಯಲ್ಲಿ ಗಂಗೆ ಹರಿಯಿತು. ಹಾಗಾಗಿ ಈ ಕ್ಷೇತ್ರಕ್ಕೆ ಸಿದ್ಧಗಂಗಾ ಎಂಬ ಹೆಸರು ಬಂತು' ಎಂಬ ನಂಬಿಕೆಯೂ ಇದೆ.

ಸಿದ್ಧಗಂಗಾ ಪರಿಸರದ ಸುತ್ತ ಈಗ ಕೇವಲ ಮೂರು-ನಾಲ್ಕು ಮಠಗಳಿದ್ದರೂ ಕೂಡ, ಹಿಂದೆ ೬೪ ಮಠಗಳಿದ್ದವು ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ. ಅದರ ಮುಂದುವರಿಕೆ ಎಂಬಂತೆ ಕಂಬಾಳು ಮರುಳ ಸಿದ್ಧರ ಮಠ, ಎಳನಾಡು, ನೊಣವಿನಕೆರೆ...ಇತ್ಯಾದಿ ಮಠಗಳು ಇವತ್ತಿಗೂ ಧರ್ಮ ಜಾಗೃತಿ, ಸಮಾಜಮುಖಿಯಾದ ಕಾರ್ಯಗಳನ್ನು ಮಾಡುತ್ತಿವೆ. ಅಡವಿ ಸ್ವಾಮಿಗಳ ದಾಸೋಹ, ಉದ್ದಾನ ಶಿವಯೋಗಿಗಳ ವಿದ್ಯಾರ್ಜನೆ ಯೋಜನೆಗಳು, ಅದೆಲ್ಲಕ್ಕಿಂತ ಮಿಗಿಲಾಗಿ ಶ್ರೀ ಶಿವಕುಮಾರ ಶ್ರೀಗಳ ಸಮಾಜಮುಖಿ ಕಾರ್ಯಗಳಿಂದ ಇವತ್ತು ಶ್ರೀ ಮಠ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಗುರು ಪರಂಪರೆ
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಕ್ರಾಂತಿಯ ನಂತರ ಶರಣರು ಗುಂಪುಗುಂಪಾಗಿ ಚದುರಿ ಹೋದರು. ಹಾಗೆ ಚದುರಿದ ಗುಂಪುಗಳಲ್ಲಿ ಕೆಲವು ಶಿವಗಂಗೆ, ಸಿದ್ಧಗಂಗೆ, ಗೂಳೂರು, ಗುಬ್ಬಿಯತ್ತ ಮುಖ ಮಾಡಿದವು. ಶರಣ ಧರ್ಮ ಬಿತ್ತರಿಸುವ ಪ್ರಯತ್ನ ನಡೆಯಿತು. ಆ ಕ್ರಾಂತಿಯ ಪ್ರತಿಫಲವೇ ಸಿದ್ಧಗಂಗೆ ಉಗಮಕ್ಕೆ ಪ್ರೇರಣೆ ಎನ್ನುತ್ತಾರೆ. ಅಂದಹಾಗೆ ಆವತ್ತು ಶ್ರೀ ಕ್ಷೇತ್ರ ಈ ಪರಿ ಬೆಳೆದಿರಲಿಲ್ಲ. ದಟ್ಟವಾದ ಅಡವಿಯ ನಡುವೆ ಕಲ್ಲುಗುಹೆಗಳು, ಅಲ್ಲಿ ಧ್ಯಾನ, ಯೋಗಗಳಲ್ಲಿ ಮಗ್ನರಾಗುವ ಶಿವ ಶರಣರು... ಅಪ್ಪಟ ಧಾರ್ಮಿಕ ಕೇಂದ್ರವಾಗಿತ್ತು. ಶರಣ ಪರಂಪರೆಯನ್ನು ನಿರ್ಮಿಸುವ ಕೇಂದ್ರವಾಗಿತ್ತು.

ಗೋಸಲ ಸಿದ್ಧೇಶ್ವರರ ನಂತರ ಶಂಕರ ಪ್ರಭುಗಳು, ಚನ್ನಬಸವೇಶ್ವರರು...ಹೀಗೆ ಅನೇಕ ಶರಣರು ಪೀಠವನ್ನು ಅಲಂಕರಿಸಿದರು. ೧೮ನೇ ಶತಮಾನದಿಂದ ಈಚಗೆ ಶ್ರೀ ನಂಜುಂಡ ಸ್ವಾಮಿಗಳು (೧೭೮೪-೧೮೨೦), ಶ್ರೀ ರುದ್ರಸ್ವಾಮಿಗಳು(೧೮೨೦-೧೮೫೩), ಶ್ರೀ ಉದ್ದಾನಸ್ವಾಮಿಗಳು(೧೯೦೧-೧೯೪೧), ಶ್ರೀ ಮರುಳಾರಾಧ್ಯ ಸ್ವಾಮಿಗಳು(೧೯೨೪-೧೯೩೦) ಪೀಠಾಪತಿಗಳಾದರು. ಶರಣ ಧರ್ಮದ ತಿರುಳನ್ನು ಮನೆ-ಮನಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು. ನಂತರ ಶ್ರೀ ಸಿದ್ಧಲಿಂಗ ಸ್ವಾಮಿಗಳು (೧೮೫೩-೧೯೦೧) ಪೀಠದಲ್ಲಿ ವಿರಾಜಮಾನರಾದರು.

ಆದರೂ ಈ ಕ್ಷೇತ್ರಕ್ಕೊಂದು ಹೊಸ ಖದರು ಬಂದಿದ್ದು ೧೮ನೇ ಶತಮಾನದ ನಂತರವೇ ಎನ್ನಬಹುದು. ೧೮೫೦ರ ಸುಮಾರಿಗೆ ಗುಬ್ಬಿಗೆ ಬಂದವರು, ಅಟವಿ ಸ್ವಾಮಿಗಳು. ಉತ್ತರ ಕರ್ನಾಟಕದಿಂದ ಬಂದ ಅಟವಿ ಶ್ರೀಗಳು, ಗೋಸಲ ಚನ್ನಬಸವೇಶ್ವರರ ಸಮಾ ಸೇವೆಯಲ್ಲಿ ಮಗ್ನರಾದರು. ಅಲ್ಲಿಯೇ ಒಂದು ಮಠವನ್ನು ಸ್ಥಾಪಿಸಿದರು. ಆದರೆ ಪಕ್ಕದ ಕ್ಷೇತ್ರವಾದ ಸಿದ್ಧಗಂಗೆಯ ಮಹಿಮೆ ಶ್ರೀಗಳನ್ನು ಸೆಳೆಯಿತು. ಅದೇ ಹೊತ್ತಿಗೆ ಸಿದ್ಧಗಂಗೆಯ ಪೀಠಾಪತಿಗಳಾದ ಸಿದ್ಧಲಿಂಗ ಶ್ರೀಗಳು ಲೌಕಿಕವನ್ನೆಲ್ಲ ತೊರೆದು ಅಧ್ಯಾತ್ಮ ಲೋಕದಲ್ಲಿ ಮುಳುಗಿಹೋಗಿದ್ದರು.

ದೈವಿಚ್ಛೆ ಎಂಬಂತೆ ಸಿದ್ಧಗಂಗೆಯ ಉಸ್ತುವಾರಿ ಹೊಣೆ ಅಟವಿ ಸ್ವಾಮಿಗಳ ಹೆಗಲೇರಿತು. ಮಠಕ್ಕೆ ಬರುವ ಭಕ್ತರಿಗೆಲ್ಲ ಅನ್ನ ದಾಸೋಹ ಆರಂಭವಾಯಿತು. ಸಿದ್ಧಲಿಂಗಸ್ವಾಮಿಗಳು ಐಕ್ಯರಾದ ಮೇಲೆ ಅಟವಿ ಶ್ರೀಗಳು ಪೂರ್ಣವಾಗಿ ಸಿದ್ಧಗಂಗೆಯ ಸೇವೆಗೆ ಸನ್ನದ್ಧರಾದರು. ಮಠದ ಅಧ್ಯಕ್ಷರಾಗಿ ಸಮಾಜಮುಖಿ ಕಾಯಕಗಳನ್ನು ಕೈಗೆತ್ತಿಕೊಂಡರು. ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಗೆಗೂ ಮಠ ಕೈ ಹಾಕಿತು. ವಿದ್ಯಾರ್ಥಿನಿಲಯ ಸ್ಥಾಪನೆ ಪರಿಕಲ್ಪನೆಯನ್ನು ಸಮಾಜಕ್ಕೆ ತೋರಿಸಿತು...ಅಲ್ಲಿಂದ ಶ್ರೀ ಮಠದ ಇತಿಹಾಸವೇ ಬದಲಾಯಿತು ಅಂದರೂ ತಪ್ಪಾಗಲಾರದು.

ತದನಂತರ ಉದ್ದಾನ ಶಿವಯೋಗಿಗಳು ಪೀಠಾರೋಹಣ ಮಾಡಿದರು. ಇವರ ಕಾಲದಲ್ಲಿ ದಾಸೋಹ ಯೋಜನೆ ಮತ್ತಷ್ಟು ಬಲಗೊಂಡಿತು. ೧೯೧೭ರ ಸುಮಾರಿಗೆ ಶ್ರೀಮಠದಿಂದ ಸಂಸ್ಕೃತ ಪಾಠಶಾಲೆ ಆರಂಭವಾಯಿತು. ಉಚಿತ ಸಾವರ್ಜನಿಕ ವಿದ್ಯಾರ್ಥಿನಿಲಯಕ್ಕೂ ಶ್ರೀಗಳು ಚಾಲನೆ ನೀಡಿದರು. ಅನ್ನ ದಾಸೋಹದ ಜತೆಗೆ ಅಕ್ಷರ ದಾಸೋಹಕ್ಕೂ ಆದ್ಯತೆ ನೀಡಿದ ಶ್ರೀಗಳು ಮಠವನ್ನು ಸಮಾಜಮುಖಿ ಕಾರ್ಯಗಳತ್ತ ಕೊಂಡ್ಯೊದರು. ಶ್ರೀ ಕ್ಷೇತ್ರದಲ್ಲಿ ಪ್ರತಿ ಶಿವರಾತ್ರಿಯಂದು ಅದ್ಧೂರಿಯಾಗಿ ನಡೆಯುವ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ರೂವಾರಿಗಳು ಕೂಡ ಉದ್ದಾನ ಶಿವಯೋಗಿಗಳೇ. ೧೯೦೫ರಲ್ಲಿ ಶ್ರೀಗಳು ಈ ಜಾತ್ರೆಯನ್ನು ಪ್ರಾರಂಭಿಸಿದರು. ಈ ಜಾತ್ರೆಯಲ್ಲಿ ಪಾಲ್ಗೊಳ್ಳುವರೆಲ್ಲರಿಗೂ ದಾಸೋಹ ನಡೆಸುವ ಬೃಹತ್ ಯೋಜನೆಯ ಸೂತ್ರಧಾರರಾದರು.
ಇವರು ಐಕ್ಯರಾದ ನಂತರ ಶ್ರೀ ಮರುಳಾರಾಧ್ಯರು(೧೯೨೪) ಪೀಠವನ್ನೇರಿದರು. ದುರಂತ ಎಂಬಂತೆ ಪೀಠವೇರಿದ ಅಲ್ಪ ಅವಯಲ್ಲೇ ಇವರು ಲಿಂಗೈಕ್ಯರಾದರು.

ಸುವರ್ಣಯುಗ
`ಇವ ಎಣ್ಣೆ ಬತ್ತಿಗಳಿಂದ ಸಿದ್ಧವಾದ ದೀಪವಿದ್ದಂತೆ, ಬತ್ತಿಯ ತುದಿಗೆ ಜ್ಯೋತಿ ಮುಟ್ಟಿದರೆ ಹೇಗೆ ಪ್ರಜ್ವಲಿಸುವುದೋ, ಹಾಗೇ ಈತನಿಂದಲೂ ಮಠ ಬೆಳಗುತ್ತದೆ' ಹಾಗಂತ ಉದ್ದಾನ ಶ್ರೀಗಳು, ಶ್ರೀ ಶಿವಕುಮಾರ ಸ್ವಾಮಿಜೀಯವರನ್ನು ಕುರಿತು ಭರವಸೆಯ ಸಾಲನ್ನು ಉದ್ಗರಿಸಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಶ್ರೀಗಳ ಭರವಸೆಯನ್ನು ಅಕ್ಷರಶಃ ನಿಜ ಎಂದು ಸಾಬೀತುಪಡಿಸಿದ್ದಾರೆ. ೧೯೪೧ರಿಂದ ಶ್ರೀ ಕ್ಷೇತ್ರ ಸ್ವಾಮೀಜಿಗಳ ದಿವ್ಯ ಮಾರ್ಗದರ್ಶನದಲ್ಲೇ ಮುಂದುವರಿದುಕೊಂಡು ಬರುತ್ತಿದೆ.
ಮಠದ ಆರ್ಥಿಕ ಸ್ಥಿತಿ ಆ ಪರಿ ಕರಾಳವಾಗಿದ್ದ ಕಾಲದಲ್ಲಿ ಮಠದ ಪೀಠ ಏರಿದ ಶ್ರೀಗಳು, ಮಠವನ್ನು ಈ ಪರಿ ಎತ್ತರಕ್ಕೆ ಏರಿಸುತ್ತಾರೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಠವನ್ನು ಅಂತಹದ್ದೊಂದು ಸ್ಥಿತಿಗೆ ಕೊಂಡು ಹೋಗಿರುವುದರ ಹಿಂದೆ ಶ್ರೀಗಳ ಅಪಾರ ಶ್ರಮವಿದೆ, ಸಾಧನೆಯಿದೆ. ಸಿದ್ಧಗಂಗಾ ಕ್ಷೇತ್ರ ಪವಾಡದ ಬೀಡಲ್ಲ, ಯೋಗಿ ಕಟ್ಟಿದ ನಾಡು. ಸ್ವಾಮಿಜೀಯವರ ಸಾಧನೆಯ ಕುರಿತಾಗಿ ಪ್ರತ್ಯೇಕವಾಗಿ ಅವಲೋಕಿಸಬೇಕಿರುವುದರಿಂದ ಇಲ್ಲಿ ಆ ಕುರಿತು ಹೆಚ್ಚು ಪ್ರಸ್ತಾಪಿಸುವುದಿಲ್ಲ.

ಜಾತ್ರೆಯ ವೈಶಿಷ್ಟ್ಯ
ಲೋಕದಲ್ಲಿ ಅದೆಷ್ಟೋ ಜಾತ್ರೆಗಳು ಜರುಗುತ್ತವೆ. ಆದರೂ ಸಿದ್ಧಗಂಗೆಯ ಜಾತ್ರೆ ಎಂದಾಕ್ಷಣ ನಮ್ಮಲ್ಲಿ ವಿಭಿನ್ನವಾದ ಭಾವವೊಂದು ಜಾಗೃತವಾಗುತ್ತದೆ. ಹೌದು ಜಾತ್ರೆಯ ಹಿಂದಿರುವ ಭವ್ಯವಾದ ಇತಿಹಾಸದ, ಶ್ರೀಗಳ ಸುಂದರವಾದ ಪರಿಕಲ್ಪನೆ ಉತ್ಸವಕ್ಕೊಂದು ಹೊಸ ಜೀವ ತುಂಬಿದೆ. ಶಿವರಾತ್ರಿ ಸಮಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ, ಜಾತ್ರೆ, ದನಗಳ ಹಬ್ಬವನ್ನು ೧೦ ದಿನಗಳ ಕಾಲ ಆಚರಿಸುವ ಪರಿಕಲ್ಪನೆಗೆ ೧೯೦೯ರಲ್ಲಿ ಉದ್ದಾನ ಶಿವಯೋಗಿಗಳು ಚಾಲನೆ ನೀಡಿದರು. ಅಲ್ಲಿ ಸೇರುವ ಭಕ್ತರಿಗೆಲ್ಲ ಅನ್ನ ಸಂತರ್ಪಣೆ ಮಾಡುವ ವ್ಯವಸ್ಥೆ ಆರಂಭವಾಯಿತು. ಜಾತ್ರೆ ಸಮಯದಲ್ಲಿನ ದೇವರ ಉತ್ಸವ, ಶಿವರಾತ್ರಿಯ ಮರುದಿನ ಜರುಗುವ ರಥೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ದನಗಳ ಪರಿಷೆ ಮೊದಲಾದವು ಇವತ್ತಿಗೂ ಜನರನ್ನು ಆಕರ್ಷಿಸುತ್ತಿವೆ. ವರ್ಷ ಕಳೆದಂತೆ ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಏರುತ್ತಲೇ ಇದೆ. ೧೯೬೩ರಿಂದ ಈ ಜಾತ್ರೆಯಲ್ಲಿ ವಸ್ತುಪ್ರದರ್ಶನಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ.

ಪರಿಸರ ಪರಿಚಯ
ಶ್ರೀಮಠದಲ್ಲಿನ ರಮಣೀಯ ಪರಿಸರದಲ್ಲಿ ನೋಡಬೇಕಾದ ಸ್ಥಳಗಳು ಸಾಕಷ್ಟಿವೆ. ಪ್ರತಿ ಸ್ಥಳಕ್ಕೂ ಅದರದ್ದೇ ಆದ ವಿಶಿಷ್ಟ ಐತಿಹ್ಯವೂ ಇದೆ. ಬೆಟ್ಟದ ಮೇಲೆ ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಗಂಗಾಮಾತೆಯವರ ದೇವ ಮಂದಿರಗಳಿವೆ. ಬೆಟ್ಟದ ತಪ್ಪಲ್ಲಲ್ಲಿಯೇ ಹಳೆಯ ಮಠವಿದೆ. ಪಕ್ಕದಲ್ಲಿಯೇ ಪೂಜ್ಯ ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳವರ ಗದ್ದುಗೆಯಿದ್ದು ಅದು ಜಾಗೃತ ಸ್ಥಾನವಾಗಿದೆ. ಅದರ ಸಮೀಪವೇ ಶ್ರೀಶ್ರೀಗಳವರ ಶಿವಯೋಗ ಮಂದಿರ ನಿರ್ಮಾಣವಾಗುತ್ತಿದೆ. ಹಿಂಭಾಗದಿಂದ ಮುಂದೆ ಸಾಗಿದರೆ ಸಿಗುವುದು ಕೆಂಪಹೊನ್ನಯ್ಯನವರು ಕಟ್ಟಿಸಿರುವ ಭವ್ಯವಾದ ಅತಿಥಿಗೃಹ. ಮಹಾನವಮಿ ಮಂಟಪ, ಪಕ್ಕದಲ್ಲಿ ಶ್ರೀ ಮರುಳಾರಾಧ್ಯರ ಗದ್ದುಗೆ, ಹಿಂಭಾಗಕ್ಕೆ ಅನತಿ ದೂರದಲ್ಲಿ ಗೋಶಾಲೆ ನೋಡಲೇ ಬೇಕಾದವು ಅಂದರೂ ತಪ್ಪಿಲ್ಲ.

ಮಠದ ಮುಂಭಾಗದಲ್ಲಿ ಪೂಜ್ಯ ಶ್ರೀಗಳವರ ಕಾರ್ಯಾಲಯವಿದೆ. ಅದರ ಎದುರಿಗೆ ಯಾತ್ರಾರ್ಥಿಗಳಿಗೆ ದರ್ಶನ ಕೊಡುವ, ಉದ್ಧರಣೆಗಳನ್ನು ನೀಡುವ ಪವಿತ್ರ ಜಾಗವಿದೆ. ಶ್ರೀಮಠಕ್ಕೆ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಗೋಚರಿಸುವುದು ಶ್ರೀ ದರ್ಶನ ಮಂಟಪ, ಬಲಭಾಗದಲ್ಲಿ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, `ಸಿದ್ಧಗಂಗಾ' ಮಾಸಿಕದ ಕಾರ್ಯಾಲಯ, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯಗಳಿವೆ. ಶ್ರೀ ಅಟವೀ ಸ್ವಾಮಿಗಳ ಗದ್ದುಗೆ ಕೂಡ ಅದರ ಸನಿಹದಲ್ಲಿದೆ. ಅವುಗಳ ಎದುರು ಭಾಗಕ್ಕೆ ಅಕ್ಕಿ ಗಿರಣಿ, ವಜ್ರಮಹೋತ್ಸವ ಸ್ಮಾರಕ ವಿದ್ಯಾರ್ಥಿನಿಲಯವಿದೆ. ಪಕ್ಕದಲ್ಲೇ ಅಂಧ ಮಕ್ಕಳ ಪಾಠಶಾಲೆ, ಸ್ವಲ್ಪ ಮುಂದೆ ಹೋದರೆ ಸಿಗುವುದು ಬೃಹತ್ ಕಲ್ಯಾಣಿ. ಅದಕ್ಕೆ ಎದುರಾಗಿ ಬೃಹತ್ ಕಲ್ಯಾಣ ಮಂಟಪ. ಇವೆಲ್ಲವಕ್ಕೂ ಮೊದಲೇ ಕಣ್ಣಿಗೆ ಕಾಣಸಿಗುವುದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಮತ್ತು ವೇದ ಮಹಾಪಾಠಶಾಲೆ.

ಇನ್ನೂ, ಗೋಶಾಲೆಯ ಸಮೀಪ ಸಾರ್ವಜನಿಕ ವಿದ್ಯಾರ್ಥಿನಿಲಯವಿದೆ. ಕ್ಯಾತ್ಸಂದ್ರದ ಕಡೆಯಿಂದ ಬರುವಾಗ ಕಾಣ ಸಿಗುವುದು ವಸತಿಗೃಹಗಳು. ಶ್ರೀ ಬಸವೇಶ್ವರ ಉಪಾಧ್ಯಾಯ ತರಬೇತಿ ಸಂಸ್ಥೆ, ವಸ್ತುಪ್ರದರ್ಶನದ ವಿಶಾಲ ಆವರಣ, ಶ್ರೀಮಠದ ಪರಿಸರವನ್ನು ಸದಾ ತಂಪಾಗಿಟ್ಟಿರುವ ತೋಟಗಳು... ಎಲ್ಲವೂ ಶಿವಮಯ, ಬೇಸತ್ತ ಮನಸ್ಸಿಗೆ ಆನಂದ ಕೊಡುವ ಶಾಂತ ತಾಣಗಳು. ಇನ್ನೂ ಪೂಜ್ಯ ಶ್ರೀಗಳವರ ಸಾನ್ನಿಧ್ಯದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳು ಸಮವಸ್ತ್ರಧಾರಿಗಳಾಗಿ ಕುಳಿತು ಸಂಜೆ ಹಾಗೂ ಮುಂಜಾನೆಯಲ್ಲಿ ಮಾಡುವ ಸಾಮೂಹಿಕ ಪ್ರಾರ್ಥನಾ ಸಭೆಯನ್ನು ನೋಡದವ ಖಂಡಿತವಾಗಿಯೂ ಪಾಪಿ ಬಿಡಿ !

1 comment:

daya said...

Well composed and consolidated writeup.
Excellent work. May Dr. Shri bless you.
dayaking@Gmail.com