Sunday, November 30, 2008

ಸಾಧನೆ ಅಪಾರ, ಆದರೂ ಕಾಯಕವೇ ಜೀವಾಳ !


ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದರೂ ಕೂಡ ಇವತ್ತಿಗೂ ಕೈಕಟ್ಟಿ ಕುಳಿತಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀಮಠದ ಶೈಕ್ಷಣಿಕ ಸಾಧನೆಗಳು.



`ಶಿವಕುಮಾರ ಸ್ವಾಮೀಜಿ ಪೀಠಾರೋಹಣ ಮಾಡಿದ ಮೇಲೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಯಾವ ಕಾರ್‍ಯವೂ ಸಣ್ಣ ಪ್ರಮಾಣದಲ್ಲಿ ನಡೆಯುವುದೇ ಇಲ್ಲ. ಎಲ್ಲವೂ ಜಗದ್ವಿಖ್ಯಾತ ಕಾರ್‍ಯಕ್ರಮಗಳೇ. ಜಗದ್ವಿಖ್ಯಾತ ದಾಸೋಹ, ಜಗದ್ವಿಖ್ಯಾತ ವಿದ್ಯಾರ್ಥಿ ಸಮೂಹ....' ಎಂಬ ಸ್ಥಳೀಯರ ಮಾತು ಅತಿಶಯೋಕ್ತಿ ಅನ್ನಿಸುವುದಿಲ್ಲ.


ಒಂದು ಕಾಲದಲ್ಲಿ ಕಲ್ಲಿನ ಗುಹೆಯಾಗಿದ್ದ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ವಿಶ್ವವೇ ಅಚ್ಚರಿಯಿಂದ ನೋಡುವ ಮಟ್ಟಕ್ಕೆ ಬೆಳೆಸಿದ್ದರ ಹಿಂದೆ ಶ್ರೀಗಳ ಶ್ರಮವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮಠದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾಲದಲ್ಲೂ ಶ್ರೀಗಳು ಅಭಿವೃದ್ಧಿ ಯೋಜನೆಗಳಿಗೆ ಹಿಂಜರಿಯಲಿಲ್ಲ. ಸಂಘ, ಸಂಸ್ಥೆಗಳ ಸ್ಥಾಪನೆಯತ್ತ ಮುನ್ನುಗಿದರು ಎಂದರೆ ನಂಬಲು ಸ್ವಲ್ಪ ಕಷ್ಟವಾಗಬಹುದು.


ಹೌದು, ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದರೂ ಕೂಡ ಇವತ್ತಿಗೂ ಕೈಕಟ್ಟಿ ಕುಳಿತಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರ ಮಾತಿಗೆ ಪುಷ್ಟಿಕೊಡುವಂತಿದೆ ಶ್ರೀಮಠದ ಶೈಕ್ಷಣಿಕ ಸಾಧನೆಗಳು. ೧೯೧೭ರಲ್ಲಿ ಉದ್ದಾನ ಶಿವಯೋಗಿಗಳವರಿಂದ ಸಂಸ್ಕೃತ ಮತ್ತು ವೇದ ಪಾಠಶಾಲೆ ಸ್ಥಾಪನೆಯಾಯಿತು. ಶ್ರೀ ಶಿವಕುಮಾರ ಮಹಾಸ್ವಾಮಿಗಳು ೧೯೩೭ರಲ್ಲಿ ಉದ್ದಾನ ಶಿವಯೋಗಿಗಳ ಸಮ್ಮುಖದಲ್ಲಿ ಅದನ್ನು ಕಾಲೇಜಾಗಿ ಪರಿವರ್ತಿಸಿದರು. ಇಂದು ಸುಮಾರು ೨೫೦೦-೩೦೦೦ ವಿದ್ಯಾರ್ಥಿಗಳು ಈ ಸಂಸ್ಕೃತ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಕಡೆ ಊಟ, ವಸತಿಗಳ ಸೌಕರ್ಯಗಳೊಡನೆ ತರ್ಕ, ವ್ಯಾಕರಣ, ಅಲಂಕಾರ, ಶಕ್ತಿ, ವಿಶಿಷ್ಟಾದ್ವೈತ ವೇದಾಂತ ವಿಭಾಗಗಳಲ್ಲಿ ವಿದ್ವತ್ ಮಟ್ಟದವರೆಗೆ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ.


ಜತೆಗೆ ಕನ್ನಡ ಪಂಡಿತ ಪರೀಕ್ಷಾ ವಿಭಾಗವೂ ಈ ಸಂಸ್ಕೃತ ಕಾಲೇಜಿನ ಅಂಗವಾಗಿ ಉದಯಗೊಂಡಿದೆ. ಮೈಸೂರಿನ ಕನ್ನಡ ಪಂಡಿತ ಬಿ.ಎ ಇಂಟಿಗ್ರೇಟೆಡ್ ಶಾಲೆಯನ್ನು ಸರಕಾರ ಮುಚ್ಚಿದೆ. ಹೀಗಾಗಿ ಇಲ್ಲಿನ ಕನ್ನಡ ಪಂಡಿತ ಪರೀಕ್ಷಾ ವಿಭಾಗ ಇಡೀ ರಾಜ್ಯವನ್ನು ಪ್ರತಿನಿಸುತ್ತಿದೆ. ನೂರಾರು ಪಂಡಿತರನ್ನು ರಾಜ್ಯದ ಹೈಸ್ಕೂಲು ಶಿಕ್ಷಕ ಸ್ಥಾನಕ್ಕೆ ಒದಗಿಸಿದೆ. ಜೂನಿಯರ್ ಕಾಲೇಜು, ಹೈಸ್ಕೂಲ್, ಸಂಗೀತ ಶಿಕ್ಷಣ ಶಾಲೆ, ಕುರುಡರ ಶಾಲೆ, ಉಪಾಧ್ಯಾಯ ತರಬೇತಿ ಕೇಂದ್ರ (ಟಿ.ಸಿ.ಎಚ್.), ಜ್ಯೋತಿಷ್ಯ ಪಾಠಶಾಲೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ...ಮೊದಲಾದವುಗಳಿಗೆ ಶ್ರೀ ಮಠ ಆಶ್ರಯ ತಾಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳೆಲ್ಲ ಶ್ರೀ ಮಠದಲ್ಲಿಯೇ ವಸತಿಯ ಸೌಕರ್‍ಯ ಹೊಂದಿದ್ದಾರೆ. ಶ್ರೀಗಳವರು ಖುದ್ದಾಗಿ ಈ ಮಕ್ಕಳನ್ನೆಲ್ಲ ಪಾಲನೆ ಪೋಷಣೆ ಮಾಡುತ್ತಾರೆ. ತೀಡಿ, ತಿದ್ದುತ್ತಾರೆ.


ಉದ್ದಾನ ಶಿವಯೋಗಿಗಳವರ ಕಾಲದಲ್ಲಿ, ಅಂದರೆ ೧೯೪೦-೪೧ರಲ್ಲಿ ಈ ಕ್ಷೇತ್ರದ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೬೦ ಮಾತ್ರ ಇತ್ತು. ಕಾಲಕಾಲಕ್ಕೆ ಆ ಸಂಖ್ಯೆ ಗಣನೀಯವಾಗಿ ಬೆಳೆದು, ಇಂದು ಆ ಸಂಖ್ಯೆ ಸುಮಾರು ೮ಸಾವಿರಕ್ಕೆ ಏರಿದೆ. ತುಮಕೂರಿನಲ್ಲಿ ೧೯೪೪ರಲ್ಲಿಯೇ ಆರಂಭವಾದ ಸಿದ್ಧಗಂಗಾ ಹೈಸ್ಕೂಲ್, ಆವತ್ತಿನಿಂದ ಈವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.
ವಿದ್ಯಾಭ್ಯಾಸ ಕೇವಲ ನಗರ ಪ್ರದೇಶಕ್ಕೆ ಸೀಮೀತವಾಗಬಾರದು. ಹಳ್ಳಿ ಮೂಲೆಯಲ್ಲೂ ಶಾಲೆಗಳು ಆರಂಭವಾಗಬೇಕು ಎಂಬ ಸಂಕಲ್ಪದೊಂದಿಗೆ ಶ್ರೀಗಳು ಶೈಕ್ಷಣಿಕ ಕ್ರಾಂತಿಗೆ ಕೈ ಹಾಕಿದರು. ೧೯೬೨ರಿಂದಲೇ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ ಆರಂಭಿಸಲು ಶುರುವಿಟ್ಟರು. ಹೌದು, ಅದೊಂದು ಕ್ರಾಂತಿಯೇ ಸರಿ. ಅದರ ಫಲವೆಂಬಂತೆ ಇವತ್ತು ೫೫ ಪ್ರೌಢ ಶಾಲೆಗಳಿಗೆ ಮಠ ಆಸರೆಯಾಗಿದೆ.


ಜಾತಿ ಮತದ ಭೇದವಿಲ್ಲ...
ಶ್ರೀ ಮಠದ ಯಾವೊಂದು ವಿದ್ಯಾಸಂಸ್ಥೆಗೂ ಈವರೆಗೆ ಜಾತಿಯ ಸೋಂಕು ತಟ್ಟಿಲ್ಲ. ಇಲ್ಲಿನ ವಿದ್ಯಾರ್ಥಿಗಳನ್ನು ಯಾವ ಜಾತಿಯವರು ಎಂದು ಪ್ರಶ್ನಿಸುವ ಪ್ರಮಯವೇ ಬರುವುದಿಲ್ಲ. ಬಹುಶಃ ಅದೇ ಕಾರಣಕ್ಕಾಗಿ ಶ್ರೀಕ್ಷೇತ್ರ ಇವತ್ತು ಸಮಾಜದಲ್ಲಿ ಒಂದು ಸ್ಥಾನ ಗಳಿಸಿರಬಹುದು. ೧೯೮೦ರಲ್ಲಿ ೪೨ ಜಾತಿಯ ೩೮೦೦ ವಿದ್ಯಾರ್ಥಿಗಳಿಗೆ ಮಠ ಆಶ್ರಯ ನೀಡಿರುವುದು ಇವತ್ತಿಗೂ ದಾಖಲೆಯಾಗಿಯೇ ಉಳಿದಿದೆ. `ಅನ್ನ ದಾಸೋಹ, ಜ್ಞಾನ ದಾಸೋಹಗಳು ಮಾತ್ರ ಮಠದ ಗುರಿ ಹೊರತು ಒಂದು ಜಾತಿಯನ್ನು, ಪಂಗಡವನ್ನು ನಿರ್ಮಿಸುವುದು ನಮ್ಮ ಧ್ಯೇಯವಲ್ಲ' ಎಂಬ ಶ್ರೀಗಳ ಮಾತನ್ನು ಮಠದ ಎಲ್ಲ ಸಂಸ್ಥೆಗಳು ಆಜ್ಞೆಯನ್ನಾಗಿ ಸ್ವೀಕರಿಸಿವೆ.


ಶ್ರೀ ತೋಂಟದಾರ್ಯ ವಿದ್ಯಾರ್ವನೀ ಸಭಾ
ಶೈಕ್ಷಣಿಕ ಸಂಸ್ಥೆಗಳ ಜತೆಗೆ ಹತ್ತು ಹಲವು ಸಂಘಗಳ ತವರುಮನೆಯಾಗಿ ಮಠ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಾಲಿನಲ್ಲಿ ಸಿಗುವುದು ೧೯೩೮ರಲ್ಲಿ ಸ್ಥಾಪಿತವಾದ ಈ ಸಂಘ. ವಿದ್ಯಾರ್ಥಿಗಳಿಗಾಗಿ ರೂಪಿತವಾಗಿರುವ ಈ ಸಂಘದಲ್ಲಿ ಲೇಖನ, ಭಾಷಣ, ಕಾವ್ಯವಾಚನ, ವಚನ ಸ್ಪರ್ಧೆಗಳನ್ನೇರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಸೂಕ್ತ ರೀತಿಯಲ್ಲಿ ಅರಳಿಸಲು ಪ್ರಯತ್ನ ನಡೆಯುತ್ತಿದೆ.


ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿ
ಗುಬ್ಬಿ ವೀರಣ್ಣನಂಥ ಕಲಾವಿದರಿಗೆ ಜನ್ಮಕೊಟ್ಟ ಊರಲ್ಲಿ ಒಂದು ನಾಟಕ ಮಂಡಳಿ ಇಲ್ಲದೇ ಹೋದರೆ ಹೇಗೆ ಸ್ವಾಮಿ? ಅನ್ನುವವರಿಗೆ ಉತ್ತರವೆಂಬಂತೆ ಮಠದ ಆವರಣದಲ್ಲಿ ನಾಟಕ ಮಂಡಳಿಯೊಂದು ಅರಳಿದೆ. ಪ್ರತಿಭಾವಂತರಾದ ಅಧ್ಯಾಪಕ, ಸಿಬ್ಬಂದಿ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕಲೆಯನ್ನು ಸದುಪಯೋಗಮಾಡಿಕೊಳ್ಳುವ ದೃಷ್ಟಿಯಿಂದ ಜನ್ಮ ತಾಳಿದ ಈ ಮಂಡಳಿ ಶ್ರೀಮಠದ ಜಾತ್ರೆಯ ಕಾಲದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ ಅನೌಪಚಾರಿಕ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಪಾತ್ರವಹಿಸಿದೆ.


ಜನರಲ್ಲಿ ಧಾರ್ಮಿಕ ಹಾಗೂ ರಾಷ್ಟ್ರೀಯ ಮನೋಭಾವವನ್ನು ರೂಢಿಸಲು ಶ್ರಮಿಸುತ್ತಿದೆ. ಮಂಡಳಿಯಿಂದ ಪ್ರದರ್ಶಿತವಾಗಿರುವ ಭಕ್ತ ಮಾರ್ಕಂಡೇಯ, ಎಚ್ಚಮ ನಾಯಕ, ರಾಜಶೇಖರ ವಿಲಾಸ ಮತ್ತು ಜಗಜ್ಯೋತಿ ಬಸವೇಶ್ವರ ನಾಟಕಗಳು ಜನ ಮಾನಸದಲ್ಲಿ ಅಚ್ಚಾಗಿಬಿಟ್ಟಿವೆ. ಅದರಲ್ಲೂ ಜಗಜ್ಯೋತಿ ಬಸವೇಶ್ವರ ನಾಟಕವಂತೂ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ೭೨೭ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮಂಡಳಿ ಪರಿಪೂರ್ಣ ಸ್ವಾವಲಂಬಿಯಾಗಿದ್ದು ರಂಗ ಸಲಕರಣೆಗಳನ್ನು ಹೊಂದಿದೆ.


ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಸಿದ್ಧಗಂಗಾ ಪ್ರಕಾಶನ
ಸಾಹಿತ್ಯ ಪ್ರಕಾಶನ ಕ್ಷೇತ್ರದಲ್ಲೂ ಶ್ರೀಮಠದ ಪಾಲಿದೆ. ಧಾರ್ಮಿಕ, ಅಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಚಾರಗಳನ್ನೊಳಗೊಂಡ ಗ್ರಂಥಗಳನ್ನು ಪ್ರಕಟಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಈ ಪ್ರಕಾಶನ 'Sri Basaveswara and his contemporaries' ಎಂಬ ಇಂಗ್ಲಿಷ್ ಗ್ರಂಥ ಮತ್ತು ಅದರ ಕನ್ನಡಾನುವಾದ `ಶ್ರೀ ಬಸವೇಶ್ವರ ಮತ್ತು ಅವರ ಸಮಕಾಲೀನರು' ಎಂಬುದನ್ನೂ, `ಸುಭಾಷಿತ ಕುಸುಮಾಂಜಲಿ' ಎಂಬ ಸಂಕಲನ ಗ್ರಂಥವನ್ನೂ `ಕರ್ಮಯೋಗಿ ಸಿದ್ಧರಾಮ' ಎಂಬ ನಾಟಕ ಮತ್ತು `ಪೌರುಷ ಪಾಂಚಜನ್ಯ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದೆ. ಶ್ರೀ ಸಿದ್ಧಗಂಗಾ ಪ್ರಕಾಶನದ ಹೆಸರಿನಲ್ಲಿ `ಕರ್ತಾರನ ಕಮ್ಮಟ', `ಶಿವಯೋಗಿ ಉದ್ದಾನ ಯತೀಶ್ವರ ', `ವಚನಗಂಗಾ' ಮತ್ತು `ವಚನಬಿಲ್ವ' ಶಟಸ್ಥಲಶಿಲ್ಪಿ ಚನ್ನಬಸವಣ್ಣ ಕೃತಿಗಳನ್ನು ಪ್ರಕಟಿಸಿದೆ.


ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ
ಶ್ರೀ ಮಠದ ಆಶ್ರಯ ಪಡೆದು ವಿದ್ಯಾವಂತರಾಗಿ ದೇಶ ವಿದೇಶಗಳ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ಮಾತೃಸಂಸ್ಥೆಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ೧೯೫೪ನೇ ಅಕ್ಟೋಬರ್ ೪ ರಂದು ಈ ಸಂಘವನ್ನು ಸ್ಥಾಪಿಸಲಾಯಿತು.


ಅಂದಿನಿಂದ ಸಂಘವು ಪ್ರಗತಿಪಥದಲ್ಲಿ ಮುನ್ನಡೆದು ಗಣನೀಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ. ಜಾತ್ರೆಯ ಕಾಲದಲ್ಲಿನ `ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ` ಈ ಸಂಘದ ಕೊಡುಗೆಯಾಗಿದೆ. ಸಿದ್ಧಗಂಗಾ ಮಾಸಪತ್ರಿಕೆ ಕೂಡ ಸಂಘದ ಕೊಡುಗೆಯೇ. ಶ್ರೀ ಶ್ರೀಗಳವರ ಪೀಠಾರೋಹಣ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಕಟಿಸಿದ `ಸಿದ್ಧಗಂಗಾಶ್ರೀ' ಬೃಹತ್ ಅಭಿನಂದನಾ ಗ್ರಂಥದಲ್ಲಿ ಸಂಘದ ಪಾಲು ಅಪಾರ. ಇನ್ನು ವಜ್ರಮಹೋತ್ಸವದ ಸಂಸ್ಮರಣವಾಗಿ ಮೂಡಿಬಂದ `ದಾಸೋಹ ಸಿರಿ' ಮಹಾಸಂಪುಟ ಪ್ರಕಟಣೆಯೂ ಸಂಘದ ಸೇವೆಗೆ ಸಾಕ್ಷಿಯಾಗಿದೆ. ಬೆಂಗಳೂರು, ಮೈಸೂರುಗಳಲ್ಲಿರುವ ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಈ ಸಂಘದ ಶಾಖೆ ಸ್ಥಾಪಿಸಿದ್ದಾರೆ.


ಸಿದ್ಧಗಂಗಾ ಮಾಸಪತ್ರಿಕೆ
ಇದು ಶ್ರೀಮಠದ ಮುಖವಾಣಿ. ಆದರೂ ಧಾರ್ಮಿಕ ಶಿಕ್ಷಣ ಪ್ರಸಾರ, ಸಾಮಾಜಿಕ ಆರೋಗ್ಯ, ನೈರ್ಮಲ್ಯಗಳ ಸಾಧನೆಯೇ ಪತ್ರಿಕೆಯ ಜೀವಾಳ. ೧೯೬೫ರಲ್ಲಿ ತ್ರೈಮಾಸಿಕವಾಗಿ ಪ್ರಾರಂಭವಾದ `ಸಿದ್ಧಗಂಗಾ' ನಂತರ ಮಾಸಿಕವಾಗಿ ಮುನ್ನಡೆದು ಬೆಳ್ಳಿಹಬ್ಬ ಆಚರಿಸುವ ಉತ್ಸಾಹದಲ್ಲಿದೆ. ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸಿಯನ್ನೂ ಗಳಿಸಿದೆ. ಅಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಲೇಖನಗಳ ಜತೆಗೆ ಪೂಜ್ಯ ಶ್ರೀಶ್ರೀಗಳವರ ಶ್ರೀವಾಣಿಯೊಂದಿಗೆ, ಶ್ರೀಗಳವರ ಕಾರ್ಯಕ್ರಮಗಳ ಪರಿಚಯದೊಂದಿಗೆ, ಶ್ರೀ ಕ್ಷೇತ್ರವಾರ್ತೆಯನ್ನೊಳೊಂದಿಗೆ ಪ್ರತಿ ತಿಂಗಳೂ ಪ್ರಕಟವಾಗುತ್ತಿದೆ.


ವಸ್ತು ಪ್ರದರ್ಶನ
ಶಿವರಾತ್ರಿಯ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಕಾಲದಲ್ಲಿ ೧೫ ದಿನಗಳ ಕಾಲ ಈ ವಸ್ತು ಪ್ರದರ್ಶನ ನಡೆಯುತ್ತದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಾನಾ ಇಲಾಖೆಗಳು ಹಾಗೂ ಖಾಸಗಿ ಉದ್ಯಮಿಗಳೂ ತಮ್ಮ ಸಂಸ್ಥೆಗಳ ಮಳಿಗೆಗಳನ್ನೂ ಇಡುತ್ತಾರೆ.


ಆಚರಣೆ ಹಾಗೂ ಸಮ್ಮೇಳನಗಳು
ಅಧ್ಯಾತ್ಮದ ಜತೆಗೆ ಸಾಹಿತ್ಯದ ಘಮವೂ ಇದೆ, ವಿಜ್ಞಾನದ ಲೇಪವೂ ಇದೆ ಎಂಬುದಕ್ಕೆ ಸಾಕ್ಷಿಯಾಗಿರುವುದು ಮಠದಲ್ಲಿ ನಡೆದಿರುವ, ನಡೆಯುತ್ತಿರುವ ಶಿಬಿರ, ಸಮ್ಮೇಳನಗಳು. ೧೯೬೩ರಲ್ಲಿ ಪ್ರಸಿದ್ಧ ವಿದ್ವಾಂಸರಾದ ಡಾ. ರಂ. ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದಿದೆ. ೧೯೬೪ರಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ೧೯೭೬ರಲ್ಲಿ ಅಖಿಲ ಕರ್ನಾಟಕ ದ್ವಿತೀಯ ಸಂಸ್ಕೃತ ಸಮ್ಮೇಳನ ಜರುಗಿದೆ. ೧೯೮೫ರಲ್ಲಿ ಇಲಕಲ್ ಶ್ರೀ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಶರಣ ಸಿದ್ಧಾಂತ ವಿದ್ಯಾಪೀಠದ ವತಿಯಿಂದ ಒಂದು ವಾರದ ಶಿವಾನುಭವ ತರಬೇತಿ ಶಿಬಿರ ನಡೆದಿತ್ತು. ಜತೆಗೆ ಪ್ರತಿವರ್ಷ ಸಂಕ್ರಾಂತಿಯಂದು ಪರಮಪೂಜ್ಯ ಶ್ರೀ ಆಟವೀಸ್ವಾಮಿಗಳ ಹಾಗೂ ಪರಮಪೂಜ್ಯ ಶಿವಯೋಗಿ ಶ್ರೀ ಉದ್ದಾನಸ್ವಾಮಿಗಳ ಪುಣ್ಯಾರಾಧನೆ ಹಾಗೂ ಗ್ರಾಮಾಂತರ ಬಸವ ಜಯಂತಿ ವಾರ್ಷಿಕ ಸಮಾರೋಪ ಸಮಾರಂಭಗಳು ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತವೆ.


ಅದ್ಧೂರಿ ನವರಾತ್ರಿ ಆಚರಣೆ ಮಠದ ವೈಶಿಷ್ಟ್ಯಗಳಲ್ಲೊಂದು. ಶ್ರಾವಣಮಾಸದ ವಿಶೇಷ ಸಂದರ್ಭಗಳಲ್ಲಿ ಕೀರ್ತನೆ, ಶರಣರ ಪುರಾಣ ಪ್ರವಚನಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ನಡೆವ ಶೂನ್ಯ ಸಂಪಾದನೆ ಪ್ರವಚನ ಕಾರ್ಯಕ್ರಮ ನಿರಂತರವಾಗಿ ನಡೆದು ಬರುತ್ತಿದೆ.

ಶ್ರೀ ಸಿದ್ಧಗಂಗಾ ಶಿಕ್ಷಣ ಹಾಗೂ ಇತರ ಸಂಸ್ಥೆಗಳು
೧. ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು (ಎಸ್‌ಐಟಿ) ೦೧
೨. ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ೦೧
೩. ಸಿದ್ಧಗಂಗಾ ಪಾಲಿಟೆಕ್ನಿಕ್ ೦೧
೪. ಸಿದ್ಧಗಂಗಾ ಕಾಲೇಜ್ ಆಫ್ ಫಾರ್‍ಮಸಿ ೦೧
೫. ಸಿದ್ಧಗಂಗಾ ಕಾಲೇಜ್ ಆಫ್ ನರ್ಸಿಂಗ್ ೦೧
೬. ತಾಂತ್ರಿಕ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಗಳು (ಐಟಿಐ) ೦೩
೭. ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ.) ೦೧
೮. ಶಿಕ್ಷಕರ ತರಬೇತಿ ಸಂಸ್ಥೆಗಳು (ಡಿ.ಎಡ್.) ೦೩
೯. ಪ್ರಥಮ ದರ್ಜೆ ಕಾಲೇಜುಗಳು ೦೪
೧೦. ಪದವಿಪೂರ್ವ ಕಾಲೇಜುಗಳು ೦೮
೧೧. ಸಂಯುಕ್ತ ಪದವಿಪೂರ್ವ ಕಾಲೇಜುಗಳು ೦೪
೧೨ ಪ್ರೌಢ ಶಾಲೆಗಳು ೫೫
೧೩. ಸಂಸ್ಕೃತ ಕಾಲೇಜು ೦೧
೧೪. ಸಂಸ್ಕೃತ ಪಾಠಶಾಲೆಗಳು ೨೦
೧೫. ಕನ್ನಡ ಪಂಡಿತ ಬಿ.ಎ. ಇಂಟಿಗ್ರೇಟೆಡ್ ಕೋರ್ಸ್ ೦೧
೧೬. ಉನ್ನತ ಪ್ರಾಥಮಿಕ ಶಾಲೆಗಳು ೦೭
೧೭. ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು (ನರ್ಸರಿ) ೦೭
೧೮. ಅಂಧ ಮಕ್ಕಳ ಪಾಠಶಾಲೆ ೦೨
೧೯. ಶ್ರೀ ಸಿದ್ಧಗಂಗಾ ಅಂಗವಿಕಲರ ಸಮನ್ವಯ ಶಿಕ್ಷಣ ಕೇಂದ್ರ ೦೧
೨೦. ಶ್ರೀ ಸಿದ್ಧಗಂಗಾ ದೈಹಿಕ ಶಿಕ್ಷಣ ಮಹಾವಿದ್ಯಾಲಯ ೦೧
೨೧. ಆರೋಗ್ಯ ಸಂಸ್ಥೆ ೦೧
೨೨. ಗ್ರಂಥಾಲಯಗಳು ೦೫
೨೩. ವಾಚನಾಲಯಗಳು ೦೫
೨೪. ಉಚಿತ ವಿದ್ಯಾರ್ಥಿ ನಿಲಯಗಳು ೦೫
೨೫. ಸಹಕಾರಿ ಸಂಘಗಳು ೦೫
------------------------------------------------------
ಒಟ್ಟು ಸಂಸ್ಥೆಗಳು ೧೪೪
------------------------------------------------------

No comments: