Sunday, November 30, 2008

ಸಾಧಕನ ಅನುಭೂತಿಗೆ ಮಾತ್ರ ದಕ್ಕುವ ದೇವರು


`ದೇಶದ ಸಮಕಾಲೀನ ರಾಜಕೀಯ ಸಂಕೀರ್ಣತೆಗೆ ಧಾರ್ಮಿಕ ಮುಖಂಡರ ಮಾರ್ಗದರ್ಶನ ಅತ್ಯಗತ್ಯ. ರಾಷ್ಟ್ರ ಸಮಗ್ರತೆಯ ಜತೆಜತೆಗೇ ಸ್ಥಿರ ಆಡಳಿತದ ಮೂಲಕ ಅಭಿವೃದ್ಧಿ ಸಾಧನೆಯ ದೃಷ್ಟಿಯಿಂದ ಎಲ್ಲ ಮಠಾಶರೂ ಚಿಂತನೆಗಿಳಿಯಲು ಇದು ಸಕಾಲ...'


ತಮಾನ ಕಂಡ ಮಹಾಯೋಗಿ, ತ್ರಿವಿಧ ದಾಸೋಹಿ, ಶ್ರೀ ಸಿದ್ಧಗಂಗಾ ಮಠಾಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಅಂತರಾಳದಿಂದ ಹೊರಹೊಮ್ಮಿದ ಈ ಮಾತುಗಳಲ್ಲಿ ಇಂದಿನ ಪ್ರಭುತ್ವ ಪರಂಪರೆ ದಾರಿ ತಪ್ಪುತ್ತಿರುವ ಬಗೆಗೆ ಅಸಮಾಧಾನವಿತ್ತೇನೋ ? ಎಲ್ಲವನ್ನೂ ಮೀರಿ ನಿಂತ ನಿರ್ವಿಕಾರ, ನಿರ್ಲಿಪ್ತ ಮುಖಮುದ್ರೆಯ ಮಹಾನ್ ಸನ್ಯಾಸಿಯ ಭಾವನೆಗಳನ್ನು ಗುರುತಿಸಲಾಗಲಿಲ್ಲ. ಆದರೆ ಧ್ವನಿಯಲ್ಲಿ ಖಚಿತತೆ ವ್ಯಕ್ತವಾಗಿತ್ತು.


`ರಾಜಕಾರಣವೇ ಇಂದು ಸಮಸ್ಯೆಯಾಗಿದೆ. ಗೋಜಲುಗಳಿಂದ ಹೊರಬರಲಾಗದ ಸ್ಥಿತಿಗೆ ಪ್ರಜಾಪ್ರಭುತ್ವವನ್ನು ಕೊಂಡೊಯ್ಯುತ್ತಿದ್ದೇವೆ. ಪ್ರಜ್ಞಾವಂತ ಪ್ರಜೆಗಳು ಮಾತ್ರ ಇದಕ್ಕೆ ಪರಿಹಾರ ರೂಪಿಗಳಾಗಬಲ್ಲರು. ಅಂಥದ್ದೊಂದು ಜಾಗೃತಿಯನ್ನು ನಾಡಿನ ಜನ ಮಾನಸದಲ್ಲಿ ಮಠಾಶರು ಬಿತ್ತಬೇಕಿದೆ...' ನಾಡಿನ ಕುಲಗುರುವಿನ ಅಕಾರಯುತ ಅಭಿಪ್ರಾಯದಂತಿದ್ದವು ಆ ಮಾತುಗಳು.


ನೂರರ ಬೆಳಕಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸುಸಂದರ್ಭದಲ್ಲಿ ಶ್ರೀಗಳು ನೀಡಿದ ಸಂದರ್ಶನದಲ್ಲಿ, ಧರ್ಮ, ಶಿಕ್ಷಣ, ರಾಜಕೀಯ, ಅರ್ಥವ್ಯವಸ್ಥೆ, ಅಭಿವೃದ್ಧಿ, ಅಧ್ಯಾತ್ಮ ಇತ್ಯಾದಿ ವಿಷಯಗಳ ಬಗೆಗಿನ ತಮ್ಮ ಸುದೀರ್ಘ ಅನುಭವ, ದೂರ ದರ್ಶಿತ್ವ,ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಂಡರು.


ದೇಹ ಬಾಗಿದಂತೆ ಕಂಡರೂ, ಸೈದ್ಧಾಂತಿಕ ನೆಲೆಯಲ್ಲಿ ಇನಿತೂ ಬಗ್ಗುವ ವ್ಯಕ್ತಿತ್ವ ತಮ್ಮದಲ್ಲವೆಂಬುದನ್ನು ಸ್ಪಷ್ಟ ಮಾತುಗಳಲ್ಲಿ ಶ್ರೀಗಳು ನಿರೂಪಿಸಿಬಿಟ್ಟರು. ವಯೋ ಸಹಜವಾಗಿ ಧ್ವನಿ ಕ್ಷೀಣಿಸಿದೆ. ಆದರೆ ಹೇಳಬೇಕಾದುದರಲ್ಲಿ ಸ್ಪಷ್ಟತೆ ಇತ್ತು.


ಮಾತು ಆರಂಭವಾದದ್ದೇ ಆಸ್ತಿಕತೆ, ನಾಸ್ತಿಕತೆಯ ಸಂಘರ್ಷದ ವಿಚಾರದಿಂದ. `ಎರಡರ ನಡುವೆ ಇಂದು ಅತ್ಯಂತ ಸೂಕ್ಷ್ಮ ಪೊರೆಯೊಂದು ಮಾತ್ರವೇ ಉಳಿದುಕೊಂಡಿದೆ' ಎಂದು ವಿಶ್ಲೇಷಿಸಿದ ಸ್ವಾಮೀಜಿ, `ದೇವರ ವ್ಯಾಖ್ಯಾನ ಅತ್ಯಂತ ವಿಶಾಲ ಅರ್ಥವ್ಯಾಪ್ತಿಯನ್ನು ಹೊಂದಿರುವಂಥದ್ದು. ಕಾಲ, ದೇಶದಿಂದ ಅತೀತವಾದ ಇದು ವರ್ಣನೆ ನಿಲುಕದ್ದು. ಸಾಧಕನೊಬ್ಬನ ಅನುಭೂತಿಗೆ ಮಾತ್ರ ದಕ್ಕುವ ದೇವರು ಮಹಾಶಕ್ತಿ ಸ್ವರೂಪಿ. ಅದನ್ನು ಬ್ರಹ್ಮ, ಸರ್ವಜ್ಞ, ಸರ್ವಶಕ್ತ, ಮಹಾ ವಿಜ್ಞಾನಿ- ಹೀಗೆ ಯಾವುದೇ ಹೆಸರಿನಿಂದ ಕರೆದುಕೊಳ್ಳಿ. ಆದರೆ, ಅರ್ಥ ಮಾತ್ರ ಬದಲಾಗದು.' ಸ್ವಾನುಭವವನ್ನೇ ಮಾತುಗಳಲ್ಲಿ ಕಟ್ಟಿಕೊಡುತ್ತಿದ್ದರು ಶ್ರೀಗಳು.


`ನಾನು ದೇವರನ್ನು ಕಂಡಿದ್ದೇನೆ. ಪ್ರತಿದಿನವೂ ಕಾಣುತ್ತಿದ್ದೇನೆ. ಆತನೊಂದಿಗೆ ಮಾತನಾಡುತ್ತಿದ್ದೇನೆ. ನಡೆದಾಡುತ್ತಿದ್ದೇನೆ ' ಸಹಜವಾದ, ಅಷ್ಟೇ ದೃಢವಾದ ಮಾತುಗಳು ಮತ್ತೊಮ್ಮೆ ಪರಮಹಂಸರನ್ನು ನೆನಪಿಸಿತ್ತು. `ಆತನನ್ನು ಎಲ್ಲಿ ಕಂಡಿರಿ ಸ್ವಾಮೀಜಿ ?' ಕುತೂಹಲದ ಪ್ರಶ್ನೆಗೆ ಮುಗುಳ್ನಗೆಯೊಂದಿಗೆ `ಮಕ್ಕಳಲ್ಲಿ' ಎಂದು ಉತ್ತರಿಸಿದರು.


ಹೌದು, ಸಾವಿರಾರು ಮಕ್ಕಳಿಗೆ, ಅವರ ಜೀವನ, ಶಿಕ್ಷಣಕ್ಕೆ ತಾವೇ ಉತ್ತರದಾಯಿಗಳೆಂಬಂತೆ ದಶಕಗಳಿಂದ ಸಿದ್ಧಗಂಗಾ ಮಠದಲ್ಲಿ ಆಶ್ರಯ ನೀಡಿರುವ ಅಕ್ಷರ ದಾಸೋಹಿಗೆ ಅಂಥ ಮುಗ್ಧ ಮಕ್ಕಳ ಮೊಗದಲ್ಲಲ್ಲದೇ ಬೇರೆಲ್ಲಿ ದೇವರು ಕಾಣಲು ಸಾಧ್ಯ ? `ದೇವರ ದಿವ್ಯ ದರ್ಶನದ ಪುಳಕವನ್ನು, ಅದರ ಸಾರ್ಥಕತೆಯನ್ನು ಪ್ರತಿದಿನವೂ ಮಕ್ಕಳಲ್ಲಿ ನಾನು ಕಾಣುತ್ತಿದ್ದೇನೆ' ಎಂಬ ಮಾತು ಇದಕ್ಕೆ ಸಾಕ್ಷಿಯಾಗಿತ್ತು.


ಸಮಾಜವ್ಯವಸ್ಥೆಯನ್ನು ಮೀರಿ, ಎಲ್ಲ ಲೌಕಿಕ ಆಸೆ ಆಮಿಷಗಳನ್ನು ದಾಟಿ ನಿಲ್ಲುವ ಸನ್ಯಾಸಿಯೊಬ್ಬನ ಮನೋಭಾವವನ್ನು ಒಂದೇ ಮಾತಿನಲ್ಲಿ ವಿಷದಪಡಿಸಿದ ಅವರು, ಅದು ಶುದ್ಧಾತಿಶುದ್ಧ ಸಾಧನೆಗೆ ಸಂಬಂಸಿದ ವಿಚಾರವೆಂದುಬಿಟ್ಟರು. ಆದರೆ ಮಠ-ಮಂದಿರ, ಸಾಧು-ಸಂತರೂ ಆರೋಪ, ಅಪವಾದಗಳಿಂದ ಹೊರತಾಗಿಲ್ಲದಿರುವ ಬಗ್ಗೆ ಸಮಾಜ ಸಹಜ ಅಸಹನೆಯನ್ನು ವ್ಯಕ್ತಪಡಿಸಲು ಮಾತ್ರ ಮರೆಯಲಿಲ್ಲ.


`ಈ ಭೂಮಿಯ ಮೇಲೆ ಮಾನವಧರ್ಮವನ್ನುಳಿದು ಬೇರಾವುದೇ ಧರ್ಮ ಶ್ರೇಷ್ಠವಾಗಿರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗುವುದರಲ್ಲಿ ಅರ್ಥವಿಲ್ಲ. ಸಮಾಜವನ್ನೂ ಸಂಸ್ಕಾರಯುತವಾಗಿ ಪುನರ್ ನಿರ್ಮಿಸುವ ಹೊಣೆಗಾರಿಕೆಯೊಂದಿಗೆ ಮಠಾಶರು ಮುನ್ನಡೆಯಬೇಕು'- ಜಾತಿ, ಉಪಜಾತಿಯ ಹೆಸರಲ್ಲಿ ಪರ್ಯಾಯ ಪೀಠಾಶರು ಹುಟ್ಟಿಕೊಳ್ಳುತ್ತಿರುವ ಕುರಿತಾದ ಪ್ರಶ್ನೆಗೆ ಶ್ರೀಗಳು ನೀಡಿದ ಉತ್ತರವಿದು.


ಮಾತುಕತೆ ಮಠಗಳ ಹೊಣೆಗಾರಿಕೆಯತ್ತ ಹೊರಳಿತು. `ಅಧ್ಯಾತ್ಮದ ನಂತರ ಶಿಕ್ಷಣವೇ ಧಾರ್ಮಿಕ ಸಂಸ್ಥೆಗಳ ಆದ್ಯತೆಗಳಾ ಗಬೇಕು. ಜ್ಞಾನಶಿಸ್ತಿಗೆ ಸಮಾಜವನ್ನು ಸಜ್ಜುಗೊಳಿಸುವ `ಸೇವೆ' ಮಠಗಳಿಂದಾ ಗಬೇಕು. ವಿಜ್ಞಾನ, ಪರಿಸರ, ಅಭಿವೃದ್ಧಿ ಹೀಗೆ ಸಾಮಾಜಿಕ ಆಗುಹೋಗು ಗಳೆಲ್ಲವಕ್ಕೂ ಧಾರ್ಮಿಕ ಮುಖಂಡರು ಸಾಕ್ಷಿಯಾಗುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಅಂಥವುಗಳೊಂದಿಗೆ ತಾನಿರ ಬೇಕಾದ ಅಂತರದ ಪ್ರಜ್ಞೆ, ಔಚಿತ್ಯವನ್ನರಿ ಯುವುದು ಅಗತ್ಯ. ಇದನ್ನು ಧರ್ಮಾಕಾರಿಗಳು ಅರ್ಥ ಮಾಡಿಕೊಂಡರೆ ಸಮಾಜ ಸುಂದರವಾದೀತು.'


ವಿಷಯಗಳು ಸಾಕಷ್ಟಿದ್ದವು, ಅವರೊಂದು ಅನುಭವದ ಖನಿ, ಅನುಭಾವದ ಶಿಖರ, ಮಾನವತೆಯ ಮೂರ್ತಿ, ವಾತ್ಸಲ್ಯದ ಬಿಂಬ, ಅಧ್ಯಾತ್ಮದ ಮೇರು. ಮೊಗೆದಷ್ಟೂ ಮುಗಿಯದ ಜ್ಞಾನ ಸಾಗರ. ಈ ಖನಿಯ ಎದುರು ತುಂಬಿಕೊಳ್ಳುವ ಪಾತ್ರೆ ಹೇಗಿದ್ದರೂ ಚಿಕ್ಕದೇ. ಪತ್ರಿಕೆಯೊಂದರ ಸಮಯ, ಸ್ಥಳ ಸಂಕೋಚದಿಂದಾಗಿ ಸಂದರ್ಶನಕ್ಕೊಂದು ಪೂರ್ಣ ವಿರಾಮ ಹಾಕಲಾಯಿತೇ ವಿನಾ ಆ `ಸಿದ್ಧ'ಪುರುಷ ಸುದ್ದಿಮನೆಗೆ ಬಂದು ಬಿತ್ತಿ ಹೋದ ವಿಚಾರದ ಮೆಲುಕಿಗಲ್ಲ.

ರಾಜಕಾರಣದ ಮುಖ್ಯವಾಹಿನಿಯಲ್ಲಿ ...?
ನೇರ ಪ್ರವೇಶವಲ್ಲದಿದ್ದರೂ, ಧರ್ಮಾಕಾರಿಯ ಸ್ಥಾನದಲ್ಲಿ ನಿಂತು ರಾಜಧರ್ಮವನ್ನು ಬೋಸುವ ಅನಿವಾರ್ಯತೆ ಸೃಷ್ಟಿಯಾಗಿದೆ.



ಶ್ರೀಗಳೆಂದರೆ ನೇರ ನಡೆ, ನುಡಿ


= ಕನ್ನಡ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ
= ನಿರರ್ಗಳ ಮಾತು
= ಸಂದರ್ಶನಕಾರರ ಆಸಕ್ತಿ ಪರೀಕ್ಷಿಸುವ ಸೂಕ್ಷ್ಮ ಎಚ್ಚರಿಕೆ
= ಸಂದರ್ಶಕ ಬರೆದಿದ್ದನ್ನು ಮತ್ತೆ ಖಚಿತಪಡಿಸಿಕೊಳ್ಳುವ ಜಾಣ್ಮೆ
= ವಿಶ್ವದ ಶ್ರೇಷ್ಠ ದಾರ್ಶನಿಕರ ಸಂದೇಶ ಉದ್ಧರಿಸುವ ಉತ್ಸಾಹ
= ಆಯಾಸಕ್ಕೊಳಗಾಗದ ಪ್ರವೃತ್ತಿ
= ಮಾತಿನ ಮಧ್ಯೆ ವಿಶ್ರಾಂತಿ ಬಯಸದ ಯೌವ್ವನ
= ಧ್ವನಿಯಲ್ಲಿ ಸ್ಪಷ್ಟತೆ, ಖಚಿತ ಪದ
= ಮೌನದಲ್ಲೇ ವಾತಾವರಣದ ಸಮಗ್ರ ಅವಲೋಕನ
= ಪ್ರಶಸ್ತಿ, ಪುರಸ್ಕಾರದ ಮೌಲ್ಯ ಕೆಡುತ್ತಿರುವುದಕ್ಕೆ ವಿಷಾದ ಭಾವ
=ಮಕ್ಕಳು, ಜನರಲ್ಲಿ ದೇವರ ಸಾಕ್ಷಾತ್ಕಾರವೆಂಬ ಸೌಜನ್ಯ


ಜಗದಾನಂದದ ಪರಿ



`Spiritual thinking of scientist take new form of rapturous amazement as universal law which reveals greatest
thinking compared with it all human thinking and acting is negligible reflection'

-ಒಬ್ಬ ವಿಜ್ಞಾನಿಯ ಅಧ್ಯಾತ್ಮ ಚಿಂತನೆ ಉಂಟು ಮಾಡುವ ಜಗದಾನಂದ ಮತ್ತು ಅದು ಹೊರಹಾಕುವ ನಿಬ್ಬೆರಗಾಗಿಸುವ, ಸರ್ವಶ್ರೇಷ್ಠ ವಿಚಾರಧಾರೆಯ ಮುಂದೆ ಸಾಮಾನ್ಯ ಮನುಷ್ಯನ ಚಿಂತನೆ ಹಾಗೂ ವರ್ತನೆಗಳು ತೃಣ ಸಮಾನ.
ಆಸ್ತಿಕತೆ ಮತ್ತು ನಾಸ್ತಿಕತೆಗಳ ನಡುವಿನ ಸಂಘರ್ಷದ ವಿಶ್ಲೇಷಣೆಗಿಳಿದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೇಷ್ಠ ವಿಜ್ಞಾನಿಯೊಬ್ಬನ ಮೇಲಿನ ಈ ನುಡಿಮುತ್ತನ್ನು ಉಲ್ಲೇಖಿಸಿದರು. ದೇವರನ್ನು ಮಹಾವಿಜ್ಞಾನಿಯೆಂದೇ ವ್ಯಾಖ್ಯಾನಿಸಿದ ಅವರು, ವಿಜ್ಞಾನ, ಅಧ್ಯಾತ್ಮಿಕತೆಯ ಮಿಳಿತದ ಫಲವನ್ನು ಈ ನುಡಿಗಟ್ಟಿನ ಮೂಲಕ ಅರ್ಥೈಸಿದರು. ಆದರೆ ಆ ವಿಜ್ಞಾನಿಯ ಹೆಸರು ಮಾತ್ರ ಫಕ್ಕನೆ ಅವರಿಗೆ ನೆನಪಿಗೆ ಬಾರದೇ ಹೋಯಿತು.


ದೃಢ ದೇಹ, ಮೃದು ಮನವಿರಲಿ


ತಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿ ಯಾರು?
ಗುರುಗಳಾದ ತುಮಕೂರಿನ ದಾಬಸ್‌ಪೇಟೆಯ ಶ್ರೀ ಶ್ರೀ ಉದ್ಧಾನ ಶಿವಯೋಗಿಗಳು. ಅವರು ೧೯೧೭ರಲ್ಲೇ ದಾಸೋಹಕ್ಕೆ ನಾಂದಿ ಹಾಡಿದವರು. ನಮ್ಮ ಆಶ್ರಮದ ಹಾಸ್ಟೆಲ್ ಹಾಗೂ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದವರು. ಅವರೇ ನಮಗೆ ದಾರಿ ದೀಪ.


ತಮ್ಮನ್ನು ಸೆಳೆದ ಪುಸ್ತಕಗಳು?

ಬಸವ ತತ್ತ್ವಗಳು, ರಾಧಾಕೃಷ್ಣನ್, ವಿವೇಕಾನಂದ, ಅರವಿಂದ ಘೋಷ್ ಮುಂತಾದವರ ಜೀವನ ಚರಿತ್ರೆ.

ಜೀವನದ ಸಿಹಿ-ಕಹಿ ಘಟನೆಗಳಾವವು?
ಒಳ್ಳೆಯ ಘಟನೆಗಳೆಲ್ಲ ಸಿಹಿ. ಕೆಟ್ಟ ಘಟನೆಗಳೆಲ್ಲ ಕಹಿ.

ಯುವ ಪೀಳಿಗೆಗೆ ಸಂದೇಶ?
ಮನಸ್ಸು ಮತ್ತು ದೇಹ ಶುದ್ಧವಾಗಿರಲಿ. ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಿ. ವ್ಯಸನ ತ್ಯಜಿಸಿ, ತ್ಯಾಗ ಮತ್ತು ವಿಶಾಲ ಭಾವನೆ ಬೆಳೆಸಿಕೊಳ್ಳಿ. ಮನಸ್ಸಿನೊಳಗೆ ಪರಿಶುದ್ಧ, ಉದಾತ್ತ ಚಿಂತನೆ ತುಂಬಿರಲಿ.

ಇಂದಿನ ಶಿಕ್ಷಣ ರಂಗಕ್ಕೆ ತಮ್ಮ ಸಲಹೆ?
ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.

ಇಂದಿನ ರಾಜಕಾರಣಿಗಳಿಗೆ ನಿಮ್ಮ ಬುದ್ಧಿ ವಾದ?
ಪ್ರಜಾಪ್ರಭುತ್ವ ತತ್ತ್ವಗಳಿಗೆ ಬದ್ಧರಾಗಿರಿ. ಎಂದಿಗೂ ಸರ್ವಾಕಾರಿಯಾಗದಿರಿ. ಪ್ರಗತಿ ಮತ್ತು ಜನಸೇವೆಯೇ ನಿಮ್ಮ ಮೂಲ ಮಂತ್ರವಾಗಿರಲಿ.

ಮಾಧ್ಯಮಗಳು ಹೇಗಿರಬೇಕೆಂದು ಬಯಸುತ್ತೀರಿ?
ಸದಾ ಸಮಾಜಮುಖಿಯಾಗಿ ರಬೇಕು. ಸ್ವಸ್ಥ ಸಮಾಜ ನಿರ್ಮಾಣದ ರೂವಾರಿಯಾಗಬೇಕು.

ಜಾತಿಗೊಂದು ಧರ್ಮಪೀಠ ಅಗತ್ಯವೇ?
ಈ ಬಗ್ಗೆ ಪ್ರತಿಕ್ರಿಯಿಸಲಾರೆ.

*ಧರ್ಮ ಪೀಠಕ್ಕೇರುವ, ಮಠಾಶರಾಗುವ ವ್ಯಕ್ತಿಗಳಿಗೆ `ಅರ್ಹತೆ' ನಿಗದಿಯಾಗಲೇ ಬೇಕು. ಮಾನದಂಡವನ್ನು ಮೀರಿದ ಯಾವುದೇ ಪ್ರಕ್ರಿಯೆ ಸುಸ್ಥಿರವಾಗಲಾರದು...
*ರಾಜಕಾರಣವೇ ದೇಶದ ಬೃಹತ್ ಸಮಸ್ಯೆ. ಇದನ್ನು ಸರಿಪಡಿಸದ ಹೊರತೂ ಉಳಿದೆಲ್ಲ ಅಭಿವೃದ್ಧಿ ಹುಸಿಯಾದೀತು.
*೭೫ ವರ್ಷಗಳ ನನ್ನ ಸನ್ಯಾಸ ಜೀವನದಲ್ಲಿ ಎಂದಿಗೂ ಇದರಿಂದ ಹೊರಬರುವ ಯೋಚನೆಯೂ ಸುಳಿದಿಲ್ಲ. ಅಂಥ ಸಂದರ್ಭಕ್ಕೆ ನನ್ನಲ್ಲಿ ಅವಕಾಶವೇ ಇರಲಿಲ್ಲ.
*ಸುದೀರ್ಘ ಸನ್ಯಾಸ ಪಥದ ಸಾಧನೆ, ತುಂಬು ಜೀವನದ ನಡೆ ಸಂಪೂರ್ಣ ತೃಪ್ತಿ ತಂದಿದೆ.
*`ಭಾರತ ರತ್ನ'ದ ಅಪೇಕ್ಷೆ ಇಲ್ಲ.
*ಶುದ್ಧ ಆಹಾರ-ವ್ಯವಹಾರ, ಶಾಂತ ಪೂಜೆಯೊಂದಿಗೆ ಭಗವದ್ ಸಮರ್ಪಣೆಯೇ ಸುದೀರ್ಘ ಆಯುಸ್ಸು, ದೃಢ ಆರೋಗ್ಯದ ಗುಟ್ಟು.
*ಆಸ್ತಿಕತೆಯನ್ನು ಮೀರಿ ನಾಸ್ತಿಕ ಮನೋಭಾವ ಬೆಳೆಯುತ್ತಿದೆ. ಆದರದು ಶಾಶ್ವತವಲ್ಲ.
*ದೇವರೆಂಬುದು ವರ್ಣನಾತೀತ ಮಹಾ ಶಕ್ತಿ.



ಮಿತಾಹಾರ, ಹಿತ ಚಿಂತನೆ

ಸಿದ್ಧಗಂಗಾ ಶ್ರೀಗಳು ನಿದ್ದೆ ಮಾಡುವುದು ಮೂರೂವರೆ ತಾಸು ಮಾತ್ರ. ಸೇವಿಸುವುದು ಒಂದು ಇಡ್ಲಿ ಅಥವಾ ಒಂದು ಚಪಾತಿ ಇಲ್ಲವೇ ತುಸು ಅನ್ನ ಸಾರು. ತಮ್ಮ ಆರೋಗ್ಯ, ದೀರ್ಘಾಯುಸ್ಸಿನ ರಹಸ್ಯವನ್ನು `ವಿಜಯ ಕರ್ನಾಟಕ'ದ ಸುದ್ದಿಮನೆಯಲ್ಲಿ ಸ್ವತಃ ಅವರೇ ತೆರೆದಿಟ್ಟರು.


ಸಂದರ್ಶನ: ರಾಧಾಕೃಷ್ಣ ಭಡ್ತಿ

No comments: