Sunday, November 30, 2008

ಭರವಸೆಯ ಬಿತ್ತಿರುವ ಮಹಾಬೆಳಕು

ಒಂದು ಕ್ಷಣ ಸಿದ್ಧಗಂಗಾ ಮಠವಿಲ್ಲದ ತುಮಕೂರನ್ನು ಕಲ್ಪಿಸಿಕೊಳ್ಳಿ. ಅದು ಒಮ್ಮೆಗೇ ನೂರಾರು ವರ್ಷಗಳಷ್ಟು ಹಿಂದೆ ಹೋಗಿಬಿಡುತ್ತದೆ. ಅದನ್ನು ಅವಿದ್ಯೆಯ ಕತ್ತಲೆ ಆವರಿಸಿಬಿಡುತ್ತದೆ. ಹಸಿವಿನ ಬೇಗೆಯಿಂದ ಅದು ಕಂಗಾಲಾಗುತ್ತದೆ !

ಹನ್ನೆರಡನೆಯ ಶತಮಾನದ ಶರಣರು ಹೊಸ ಸಮಾಜವನ್ನು ಕಟ್ಟಲು ಹೊಸ ಜೀವನ ದೃಷ್ಟಿಕೋನವನ್ನು ನೀಡಿದರು. ಜೀವಪರತೆ ಅದರ ಉಸಿರು: ಬದುಕಿಗೆ ಅವರು ನೀಡಿದ ಪ್ರಾಧಾನ್ಯ ಅನನ್ಯವಾದದ್ದು, ಹಾಗಾಗಿ ಬದುಕನ್ನು ಹಸನು ಮಾಡುವುದೇ ಜೀವನದ ಪರಮಗುರಿ ಎಂಬ ನಂಬಿಕೆ ಅವರದು. ಹಿಂದಿನ ವಿರಕ್ತಿಪರ ದೃಷ್ಟಿಕೋನದಂತೆ ಅವರು ಬದುಕನ್ನು ಮಿಥ್ಯ ಎನ್ನಲಿಲ್ಲ: `ಮರ್ತ್ಯ'ವನ್ನು `ಕರ್ತಾರನ ಕಮ್ಮಟ' ಎಂದರು.
ಅದನ್ನು ಕೇವಲ ಅಸ್ಪಷ್ಟ ಆದರ್ಶವಾಗಿಸಲಿಲ್ಲ. ಬದುಕನ್ನು ಉತ್ತಮಿಸಲು ಅವರು ಕಟು ವಾಸ್ತವದ ನೆಲೆಯಿಂದ ಚಿಂತಿಸಿದರು. ಜೀವಿಗಳಿಗೆ ಬದುಕಲು ಮೂಲಭೂತವಾಗಿ ಬೇಕಾದದ್ದು ಆಹಾರ. ದೇಹ ಶ್ರಮದಿಂದ ಕಳೆದುಕೊಂಡ ಶಕ್ತಿಯ ಅನುಭವವಾಗುವುದು ಹಸಿವಿನ ಮೂಲಕ; ಆದ್ದರಿಂದ ಹಸಿವು ಮಾನವನ ಆದಿ ಸಮಸ್ಯೆ. ಅದಕ್ಕೇ ದಾಸಿಮಯ್ಯ ಹಸಿವನ್ನು ಹೆಬ್ಬಾವಿಗೆ ಹೋಲಿಸುವುದು. ಹಸಿವನ್ನು ನೀಗಿಸಲು ಅನ್ನ ಮುಖ್ಯ. ಆ ಅನ್ನದ ಅಥವಾ ಆಹಾರದ ಸಮಸ್ಯೆಯನ್ನು ಪರಿಹರಿಸುವವನನ್ನು ದಾಸಿಮಯ್ಯ `ಗಾರುಡಿಗ' ಎನ್ನುತ್ತಾನೆ. ಆದರೆ ಹಸಿವಿನ ಸಮಸ್ಯೆಯನ್ನು ನೀಗಿಸುವುದು ಅಷ್ಟು ಸುಲಭವೇ? ಹಾಗಾಗಿ ಆ ದಿಸೆಯಲ್ಲಿ ದುಡಿಯುವುದನ್ನೇ ಪೂಜೆ ಎಂದು ವಚನಕಾರರು ಪ್ರತಿಪಾದಿಸಿದರು. ಅದಕ್ಕೇ ಅಂಬಿಗ ಚೌಡಯ್ಯ `ದೇಹಾರವ ಮಾಡುವಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರೇ' ಎಂದದ್ದು. ದೇಹಾರಕ್ಕಿಂತ ಆಹಾರ ಮುಖ್ಯ. ಆ ಸಮಸ್ಯೆಯ ಪರಿಹಾರಕ್ಕೆ ವಚನಕಾರರು ತೋರಿಸಿದ ದಾರಿಗಳೆಂದರೆ ಕಾಯಕ-ದಾಸೋಹಗಳು. ಕಾಯಕ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವ ಉತ್ಪಾದನೆಯ ದಾರಿಯಾದರೇ, ದಾಸೋಹ ಅದರ ವಿನಿಯೋಗದ ವಿಧಾನ.
ವಚನಕಾರರಿಗೂ ಹಿಂದೆ `ದಾನ'ದ ಪರಿಕಲ್ಪನೆಯಿತ್ತು. ಅದು ನೀಡುವುದನ್ನು ಸೂಚಿಸಿದರೂ ಅದರಲ್ಲಿ ಕೊಡುವವನ ಕೈ ಮೇಲೆ, ತೆಗೆದುಕೊಳ್ಳುವವನದು ಕೆಳಗೆ. ಹೀಗಾಗಿ ಕೊಡುವವನಿಗೆ ಮನದಾಳದಲ್ಲಿಯಾದರೂ ಮೇಲರಿಮೆ. ತೆಗೆದುಕೊಳ್ಳವವನಿಗೆ ಕೀಳರಿಮೆ. ಕೊಡುವವನದು ಹೆಮ್ಮೆ. ತೆಗೆದುಕೊಳ್ಳುವವನದು ದೈನ್ಯ. ಈ ರೀತಿಯಲ್ಲಿ ಅದು ಮನುಷ್ಯರನ್ನು ವರ್ಗಗಳಾಗಿ ಮಾಡಲು ಸಹಕಾರಿಯಾಗಿತ್ತು. ಶರಣರು ಅದರ ಬದಲು ದಾಸೋಹದ ಪರಿಕಲ್ಪನೆಯನ್ನು ನೀಡಿದರು. ಇಲ್ಲಿ ಕೊಡುವುದು ಕರ್ತವ್ಯ. ಕೊಟ್ಟಾಗ ಕೃತಕೃತ್ಯಭಾವ. ತೆಗೆದುಕೊಳ್ಳುವವನು ಜಂಗಮ. ಅಂದರೆ ಕೇವಲ ಕಾವಿಧಾರಿಯಲ್ಲ. ಜೀವಂತಿಕೆಯ ಸಂಕೇತ. ಅವನದ್ದು ಸಮಾಜವನ್ನು ತಿದ್ದುವ ಕಾಯಕ. ಆದ್ದರಿಂದ ಅವನು ಪೂಜ್ಯ. ಇಂಥವನಿಗೆ ನೀಡುವುದು ದಾಸೋಹ.
ಅಂದರೆ ಕೊಡುವವನಿಗೆ ಕೃತಕೃತ್ಯತೆಯುಂಟಾಗಬೇಕಾದರೆ ತೆಗೆದುಕೊಳ್ಳುವವನು ಪೂಜ್ಯನಾಗಿರಬೇಕು. ಅಂಥವನಿಗೆ ನೀಡಿದಾಗಲೇ ಸಾರ್ಥಕ್ಯ. ದಾಸೋಹದಲ್ಲಿ ನೀಡುವವನ ಕೈ ಮೇಲಲ್ಲ. ತೆಗೆದುಕೊಳ್ಳುವವನ ಕೈಕೆಳಗಲ್ಲ. ಬೇಡುವವನು ಜಂಗಮನಲ್ಲ; ಬೇಡಿಸಿಕೊಂಬುವವನು ಭಕ್ತನಲ್ಲ'. ಈ ದಾಸೋಹದ ಪ್ರಕ್ರಿಯೆಯಲ್ಲಿ `ದಾನ'ದ ಪರಿಕಲ್ಪನೆಯಲ್ಲಿರುವಂತೆ ಪಡೆಯುವವನ ಆತ್ಮಗೌರವಕ್ಕೆ ಭಂಗವಿಲ್ಲ.
ದಾಸೋಹ ಎಂದರೆ ಯಾವುದನ್ನು ಬೇಕಾದರೂ ನೀಡುವುದು. ಆದರೆ ಮನುಷ್ಯನ ಮೂಲಭೂತ ಅವಶ್ಯಕತೆ ಆಹಾರವಾದ್ದರಿಂದ `ದಾಸೋಹ' ಎಂದರೆ ಆಹಾರವನ್ನು ನೀಡುವುದು ಎಂಬ ಅರ್ಥ ಸಾಮಾನ್ಯವಾಯಿತು. ವಚನಕಾರರ ಕಾಲದಲ್ಲಿಯೂ ಈ ಅರ್ಥ ಜನಜನಿತವಾಗಿತ್ತು. ಅದಕ್ಕೇ ಬಸವಣ್ಣ ಉಣ್ಣುವ ಜಂಗಮಕ್ಕೆ ನೀಡದೆ ಉಣ್ಣದ ಲಿಂಗಕ್ಕೆ ನೀಡುವ ಮನೋಭಾವವನ್ನು ಟೀಕಿಸಿದ್ದು, ಈ ಪರಿಕಲ್ಪನೆ ಎಷ್ಟು ವ್ಯಾಪಕವಾಯಿತೆಂದರೆ ಮುಂದಿನ ಶತಮಾನಗಳಲ್ಲಿಯೂ ಶರಣರ ಅನುಯಾಯಿಗಳಲ್ಲಿ ಇದು ಅನುರಣಿಸಿತು. `ಶೂನ್ಯ ಸಂಪಾದನೆ'ಯ `ಪ್ರಭುದೇವರ ಆರೋಗಣೆ'ಯ ಪ್ರಸಂಗದಲ್ಲಿ ಇದರ ಆತ್ಯಂತಿಕ ಚಿತ್ರಣವಿದೆ. `ನೀವು ಬೋನ. ನಾನು ಪದಾರ್ಥ' ಎಂಬ ಭಾವನೆಯಿಂದ ನೀಡಿದಾಗಲೇ ಪ್ರಭುವಿಗೆ ತೃಪ್ತಿಯಾಗುವುದು ಎಂಬ ಸತ್ಯವನ್ನು ಚೆನ್ನಬಸವಣ್ಣ ಬಸವಣ್ಣನಿಗೇ ಮನವರಿಕೆ ಮಾಡಿಕೊಡುತ್ತಾನೆ.
ಹೀಗೆ, ಜೀವಿಗಳಿಗೆ ಅನ್ನ ನೀಡುವುದಕ್ಕೆ ಪ್ರಥಮ ಆದ್ಯತೆಯನ್ನು ವಚನಕಾರರು ನೀಡಿದ್ದರಿಂದಲೇ ಮುಂದೆ ಲಿಂಗಾಯತ ಮಠಗಳಲ್ಲಿ ದಾಸೋಹಕ್ಕೆ ಅಷ್ಟು ಮಾನ್ಯತೆ ಬಂದದ್ದು. ಮಠಗಳು ಬಯಸಿ ಬಂದವರಿಗೆ ಅನ್ನ ನೀಡುವ ಪರಿಪಾಠವನ್ನು ಮುಂದುವರಿಸಿಕೊಂಡು ಬರದೆ ಹೋಗಿದ್ದಿದ್ದರೆ ಸಮಾಜದ ಕೆಳವರ್ಗದವರು ವಿದ್ಯೆ ಕಲಿಯಲು ಸಾಧ್ಯವಾಗುತ್ತಿರಲಿಲ್ಲ. ಅದೂ ಮಠಗಳಲ್ಲಿನ ದಾಸೋಹದ ಪರಿ ಶರಣರ ಕಾಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಯಿತು. ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ನೇರವಾಗಿ ಅನ್ನ ನೀಡಿದರೆ ಕೊಟ್ಟವನು -ತೆಗೆದುಕೊಂಡವನು ಮುಖಾಮುಖಿಯಾಗುತ್ತಾರೆ. ಪ್ರಾಮಾಣಿಕರಾಗಿದ್ದರೂ ಕೊಡುವವರ ಮನಸ್ಸಿನಲ್ಲಿ ಮೇಲರಿಮೆ ಬರಬಹುದು. ಪ್ರಭುದೇವರಿಗೆ ಆರೋಗಣೆಗಿಕ್ಕುವಾಗ ಬಸವಣ್ಣನ ಮನಸ್ಸಿನ ಯಾವುದೋ ಮೂಲೆಯಲ್ಲಿ ಇಂಥ ಅಹಂಕಾರವಿತ್ತು. ಚೆನ್ನಬಸವಣ್ಣನ ಮಾತುಗಳಿಂದ ಅದು ನಿವಾರಣೆಯಾಯಿತು ಎಂಬ ಚಿತ್ರ ಮೇಲೆ ಉದಾಹರಿಸಿದ ಪ್ರಸಂಗದಲ್ಲಿಯೇ ಇದೆ. ಆದರೆ ಮಠ ಎಂಬುದು ಒಂದು ಸಂಸ್ಥೆ: ಅಲ್ಲಿ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ಹೀಗಾಗಿ ಯಾರೋ ಭಕ್ತಕೊಟ್ಟ ವಸ್ತು ಇಲ್ಲಿ ಮಠವೆಂಬ ಮಾಧ್ಯಮದ ಮೂಲಕ ಅವಶ್ಯಕತೆಯಿರುವ ವ್ಯಕ್ತಿಗೆ ಸಂದಾಯವಾಗುತ್ತದೆ. ಹೀಗಾಗಿ ಪಡೆದುಕೊಂಡವನ ಕೃತಜ್ಞತೆ ಮಠಕ್ಕೆ ಸಲ್ಲುತ್ತದೆ. ಆ ಮೂಲಕ ಮಠಕ್ಕೆ ನೀಡಿದವನಿಗೆ ಅದು ಸಲ್ಲಬೇಕು. ಹೀಗಾಗಿ ಕೊಟ್ಟವನು ತೆಗೆದುಕೊಂಡವನು ಮುಖಾಮುಖಿಯಾಗದೆಯೇ ದ್ರವ್ಯ ಇಲ್ಲಿ ಸದ್ವಿನಿಯೋಗವಾಗುತ್ತದೆ. ಭಕ್ತರ ತೊಡಗಿಕೊಳ್ಳುವಿಕೆಯಿಲ್ಲದೆ ಮಠಕ್ಕೆ ಅಸ್ತಿತ್ವವಿಲ್ಲವಾದ್ದರಿಂದ ನೀಡುವವನ ಅಹಂಕಾರಕ್ಕೆ ಇಲ್ಲಿ ಅವಕಾಶವಿಲ್ಲ. ಪಡೆಯುವವನ ಸ್ವಾಭಿಮಾನಕ್ಕೆ ಧಕ್ಕೆಯಿಲ್ಲ.
ಶ್ರೀ ಸಿದ್ಧಗಂಗಾ ಮಠ ಇಂಥ ಉನ್ನತ ಪರಂಪರೆಯ ಜೀವಂತ ಬಿಂದುಗಳಲ್ಲಿ ಒಂದು. ತನ್ನ ಅಮೋಘ ದಾಸೋಹಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಿ, ವಿದ್ಯೆಯ ಬೆಳಕನ್ನು ಹಚ್ಚಿ ಮತ್ತು ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟಿದೆ. ಹಿಂದಿನ ಪರಿಸ್ಥಿತಿಗೆ ತಕ್ಕಂತೆ ಇದ್ದಿರಬಹುದಾದ ಅಲ್ಲಿನ ವ್ಯವಸ್ಥೆ ಆಧುನಿಕ ಜಗತ್ತಿಗೆ ಅನುಗುಣವಾಗಿ ಮಾರ್ಪಾಡುಗೊಂಡು ಕೆಳ ವರ್ಗದ ಜನತೆಯ ಬಾಳಿನಲ್ಲಿ ನಂದಾದೀವಿಗೆಯನ್ನು ಬೆಳಗಿಸಿದೆ. ಅನ್ನ ದಾಸೋಹದ ಮೂಲಕ ಆರಂಭಗೊಂಡಿರಬಹುದಾದ ಈ ಮಣಿಹ ಕಳೆದ ಶತಮಾನದಿಂದ ವಿದ್ಯಾ ದಾಸೋಹಕ್ಕೂ ವ್ಯಾಪಿಸಿದೆ. ಸೌಲಭ್ಯವಂಚಿತ ಹಳ್ಳಿಗಾಡು ಪ್ರದೇಶಗಳಲ್ಲಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಅಕ್ಷರಸಂಸ್ಕೃತಿಯ ವಿಸ್ತರಣೆಗೆ ಅಪಾರ ಕೊಡುಗೆ ನೀಡಿದೆ. ಈ ವಿದ್ಯೆ ಕೇವಲ ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ತನ್ನ ಪುಸ್ತಕ ಪ್ರಕಟಣೆ ವಿಚಾರಮಂಥನ-ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಠವು ಜನರಲ್ಲಿ ತಿಳಿವಳಿಕೆಯ ಬೆಳಕನ್ನೂ ಹಂಚುತ್ತಿದೆ.
ನಲವತ್ತೆರಡು ವರ್ಷಗಳ ಹಿಂದೆಯೇ ನಾನು ತುಮಕೂರಿನಲ್ಲಿ ಓದುತ್ತಿದ್ದಾಗ ನನ್ನ ಬಹುಮಂದಿ ಸಹಪಾಠಿಗಳು ಈ ಮಠದಲ್ಲಿ ಉಣ್ಣುತ್ತಿದ್ದವರು. ತುಮಕೂರಿನ ಆಸುಪಾಸಿನಲ್ಲಿ ವಾಸಮಾಡುವ ಜನ ಒಂದಿಲ್ಲ ಒಂದಿ ರೀತಿಯಲ್ಲಿ ಸಿದ್ಧಗಂಗಾ ಮಠಕ್ಕೆ ಒಂದಲ್ಲ ಒಂದು ರೀತಿ ಋಣಿಗಳು. ಆ ಮಠವಿಲ್ಲದಿದ್ದರೆ ತುಮಕೂರು ಜಿಲ್ಲೆ ವಿದ್ಯೆಯ ವಿಷಯದಲ್ಲಿ ಬಹು ಹಿಂದೆ ಉಳಿದುಬಿಡುತ್ತಿದ್ದುದರಲ್ಲಿ ಸಂದೇಹವಿಲ್ಲ. `ಶೂನ್ಯ ಸಂಪಾದನೆಗೆ' ಅಂತಿಮ ರೂಪನ್ನಿತ್ತ ಗೂಳೂರ ಸಿದ್ಧವೀರಣ್ಣೊಡೆಯನ ಜನ್ಮತಾಣಕ್ಕೆ ಸನಿಹವಾದ ಸಿದ್ಧಗಂಗೆಯು ಮಠದ ಮೂಲಕ ವಚನಕಾರರ ಅತ್ಯಂತ ಮಹತ್ವದ ಪರಿಕಲ್ಪನೆಯಾದ ದಾಸೋಹವನ್ನು ಅಖಂಡ ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ. ಈಗ ತುಮಕೂರು ವಿದ್ಯೆಯ ಕ್ಷೇತ್ರದಲ್ಲಿ ಕರ್ನಾಟಕದ ಒಂದು ಪ್ರಮುಖ ಕೇಂದ್ರವಾಗಿರುವುದರ ಹಿಂದೆ ಸಿದ್ಧಗಂಗಾ ಮಠದ ಕೊಡುಗೆ ಸಿಂಹಪಾಲಿನದು.
ಮಠ ಎಂಬುದು ಅಮೂರ್ತವಾದುದು ನಿಜ. ಆದರೆ ಇಂಥ ಅಮೂರ್ತತೆಗೆ ಮೌಲ್ಯದ ಚೌಕಟ್ಟು ಹಾಕಿ ಅದನ್ನು ಬೆಳೆಸುವುದು ಅಸಾಮಾನ್ಯ ದುಡಿಮೆಯನ್ನು ಬೇಡುವಂಥದ್ದು. ಕೆಲವು ಶತಮಾನಗಳ ಹಿಂದೆ ಬೀಜರೂಪದಲ್ಲಿ ನೆಲೆಗೊಂಡ ಈ ಮಠ ಈಗ ಮಹಾವಟವೃಕ್ಷವಾಗಿ ಬೆಳೆದಿರುವುದು ಆಕಸ್ಮಿಕವಾಗಿಯಲ್ಲ. ತಾನೇ ತಾನಾಗಿ ಒಂದು ಮಠ ಬೆಳೆಯಬಹುದಾದರೆ ಎಲ್ಲ ಮಠಗಳು ಹಾಗೆ ಬೆಳೆದಿಲ್ಲವೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬೀಜದಲ್ಲಿ ಮರವಾಗುವ ಶಕ್ತಿಯಿದ್ದರೂ ಅದು ಸಾಕಾರಗೊಳ್ಳುವುದು ಅದಕ್ಕೆ ಪೂರಕ ಪರಿಸರ ದೊರಕಿದಾಗ ಮಾತ್ರ. ಅಂತಹ ಪರಿಸರವೂ ತಾನಾಗಿ ಬರುವುದಲ್ಲ. ಶ್ರಮದಿಂದ ತರಬೇಕಾದದ್ದು. ತಾನು ನಿರ್ವಹಿಸುತ್ತಿರುವ ಎಲ್ಲ ಕ್ಷೇತ್ರಗಳಲ್ಲಿ ಸಿದ್ಧಗಂಗಾಮಠವು ವ್ಯಾಪಕವಾಗಿ ಬೆಳೆದಿರುವುದಕ್ಕೆ ಕಾರಣ ಕಳೆದ ೭೫ಕ್ಕೂ ಹೆಚ್ಚಿನ ವರ್ಷಗಳಿಂದ ಅದರ ಕೈಹಿಡಿದು ನಡೆಸುತ್ತಿರುವ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಕರ್ತೃತ್ವಶಕ್ತಿ ಮತ್ತು ನಾಯಕತ್ವದ ನಿಸ್ವೃಹತೆಗಳು.
ಅವರು ಮಠಾಪತಿಗಳಾದ ಮೇಲೆ ಮಠವು ವಾಮನರೂಪಿಯಾಗಿದ್ದುದು ತ್ರಿವಿಕ್ರಮತ್ವವನ್ನು ಪಡೆಯಿತು. ಅದರ ಬಾಹುಗಳು ದೂರದೂರಕ್ಕೆ ಚಾಚಲು ಕಾರಣವಾಯ್ತು. ಜಿಲ್ಲೆಯ ಬಹುಭಾಗದ ಮೇಲೆ ಮಠದ ಮತ್ತು ಶ್ರೀ ಸ್ವಾಮಿಗಳವರ ಕರುಣಾಹಸ್ತ ಚಾಚಿಕೊಂಡಿದೆ. ಸ್ವತಃ ದೊಡ್ಡ ವಿದ್ವಾಂಸರೂ ಜ್ಞಾನಿಗಳೂ ಆದ ಶ್ರೀಗಳು ಮಾತನಾಡದೆಯೇ ಸುತ್ತಲಿನ ಜನರಲ್ಲಿ ಸಂದೇಶ ಬಿತ್ತಬಲ್ಲ ಚೈತನ್ಯರೂಪಿಗಳಾಗಿದ್ದಾರೆ. ದಾಸೋಹದ ಸಾಕಾರವಾಗಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಕ್ಷೇತ್ರದ ಎಲ್ಲ ಮೂಲೆಗಳ ಮೇಲೂ ಕಣ್ಣಿಟ್ಟು ಅದರ ಸ್ವಾಸ್ಥ್ಯಕ್ಕೆ ಕಾರಣೀಭೂತರಾಗಿರುವ ಅವರು ಈ ಮಣಿಹಕ್ಕೆ ತಮ್ಮನ್ನು ತೊಡಗಿಸಿಕೊಂಡ ಮೊದಲಲ್ಲಿ ಹೇಗೆ ಕಾರ್ಯಶೀಲರಾಗಿದ್ದಿರಬೇಕು ಎಂಬುದನ್ನು ಊಹಿಸಿಕೊಳ್ಳ ಹೊರಟರೆ ನಮ್ಮ ಕಲ್ಪನೆಯೂ ತತ್ತರಿಸುತ್ತದೆ.
ಒಂದು ಕ್ಷಣ ಸಿದ್ಧಗಂಗಾ ಮಠವಿಲ್ಲದ ತುಮಕೂರನ್ನು ಕಲ್ಪಿಸಿಕೊಳ್ಳಿ. ಅದು ಒಮ್ಮೆಗೇ ನೂರಾರು ವರ್ಷಗಳಷ್ಟು ಹಿಂದೆ ಹೋಗಿಬಿಡುತ್ತದೆ. ಅದನ್ನು ಅವಿದ್ಯೆಯ ಕತ್ತಲೆ ಆವರಿಸಿಬಿಡುತ್ತದೆ. ಹಸಿವಿನ ಬೇಗೆಯಿಂದ ಅದು ಕಂಗಾಲಾಗುತ್ತದೆ ! ಅಂಥ ಪವಾಡ ಇಲ್ಲಿ ನಡೆದಿದೆ. ಅದಕ್ಕೆ ಮುಖ್ಯ ಕಾರಣ ಶ್ರೀ ಶ್ರೀ ಶಿವಕುಮಾರಸ್ವಾಮಿಗಳವರು. ಪವಾಡವೆಂದರೇನು? ಮಾನವರು ಮಾಡಲು ಸಾಧ್ಯವಿಲ್ಲದ ಕಾರ್ಯಗಳನ್ನು ಮಾಡುವುದು ಎಂಬುದು ಸಾಮಾನ್ಯ ತಿಳಿವಳಿಕೆ. ದೇವಮಾನವರನ್ನು ಪವಾಡ ಪುರುಷರು ಎಂದು ಕರೆಯಲಾಗುತ್ತದೆ. ಆದರೆ ವಚನಕಾರರು ಇಂಥ ನಂಬಿಕೆಗಳನ್ನು ಅಲ್ಲಗಳೆದರು. ಬಸವಣ್ಣನೇ ಪವಾಡಗಳನ್ನು `ಹಗರಣಿಗನ ಚೋಹ' ಗಳೆಂದು ಕರೆಯುತ್ತಾನೆ. ಅಂದರೆ ನಾಟಕದಲ್ಲಿನ ಪಾತ್ರಗಳು ಸುಳ್ಳು ಎಂಬುದು ಇಂಗಿತಾರ್ಥ. ಆದರೆ ಕಾವ್ಯಗಳಲ್ಲಿ ಬಸವಣ್ಣನದೆಂದು ಆರೋಪಿಸಲಾದ ಪವಾಡಗಳನ್ನು ವಿಶ್ಲೇಷಿಸಿದರೆ ಕವಿಗಳು ವರ್ಣಿಸುವ ಅನೇಕ ಪವಾಡಗಳು ಸಾಂಕೇತಿಕವಾದವುಗಳೆಂಬುದು ಮನವರಿಕೆಯಾಗುತ್ತದೆ. ಠಕ್ಕರು ಕಟ್ಟಿಕೊಂಡಿದ್ದ ಬದನೆಕಾಯಿಗಳನ್ನು ಬಸವಣ್ಣ ಲಿಂಗಗಳಾಗಿ ಮಾಡಿದನೆಂದರೆ ಏನರ್ಥ? ಕಾಯಿಗಳನ್ನು ಕಲ್ಲುಗಳನ್ನಾಗಿ ಮಾಡಿದನೆಂದೆ? ಅಲ್ಲ, ತನ್ನ ಮಾರ್ಗವನ್ನು ಅಲ್ಲಗಳೆಯುತ್ತಿದ್ದವರೂ ತನ್ನ ಅನುಯಾಯಿಗಳಾಗುವಂತೆ ತನ್ನ ವರ್ಚಸ್ಸಿನಿಂದಾಗಿ ಮನಃಪರಿವರ್ತನೆ ಮಾಡಿದ ಎಂದು. ಅದು ಸಾಧ್ಯವಾದದ್ದು ಬಸವಣ್ಣನ ವ್ಯಕ್ತಿತ್ವದಿಂದಾಗಿ. ಆ ಅರ್ಥದಲ್ಲಿಯೇ ನಾನು ಸಿದ್ಧಗಂಗಾ ಮಠದಲ್ಲಿ ಪವಾಡ ನಡೆದಿದೆ ಎಂದದ್ದು. ಅದರ ಚಾಲಕ ಶಕ್ತಿಯಾಗಿ ಅಸಂಖ್ಯ ಜೀವರಲ್ಲಿ ಭರವಸೆಯ ಬೆಳಕನ್ನು ಬಿತ್ತಿರುವ ಈ ಮಹಾಬೆಳಕು ಮಾಡಿರುವುದು ಪವಾಡವಲ್ಲದೆ ಇನ್ನೇನು?
ನಿರ್ಲಕ್ಷ್ಯ ನಮ್ಮ ನಮ್ಮ ಸಮುದಾಯದ ಬಗೆಗಿರುವ ನಿರಭಿಮಾನ ಮತ್ತು ನಮ್ಮ ಆಸಕ್ತಿಯೆಲ್ಲ ದೂರದ ಅನ್ಯಸಮುದಾಯಗಳಲ್ಲಿ ('ಅಲ್ಲಿರುವುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ' ಎಂಬ ಭಾವ), `ಅವರಿಗೆ' ಯಾವ ದುರಂತವಾದರೇನು `ನಮ್ಮ'ಸ್ವಾರ್ಥ ಪೂರೈಸಿದರಾಯ್ತು ಎಂಬ ಸಂಕುಚಿತ ಭಾವ, ದುಡಿಯದೇ ಬಂದುದನ್ನು ಕಬಳಿಸುವ ನೀಚತನ ಮತ್ತು ಹೊಣೆಗಾರಿಕೆಯನ್ನು ಪೂರೈಸದೆ ಹಕ್ಕನ್ನು ಹಕ್ಕೊತ್ತಾಯವನ್ನಾಗಿಸುವ ಆತುರ ಮತ್ತು ಹಠ-ಇವೆಲ್ಲವೂ ಸಮಾಜದ ಅಸ್ವಾಸ್ಥ್ಯಕ್ಕೆ ಫಲವಾದ ಭೂಮಿಕೆಯನ್ನು ಸಿದ್ಧಗೊಳಿಸುತ್ತಲಿವೆ ಅಥವಾ ಅಸ್ವಾಸ್ಥ್ಯ ಭಾಗಗಳೇ ಆಗಿರುತ್ತವೆ ಎಂದರೂ ತಪ್ಪಿಲ್ಲ.
*****

No comments: