Sunday, November 30, 2008

ಸಾಧನೆಯ ಸಹ್ಯಾದ್ರಿ

ಸಿದ್ಧಗಂಗಾ ಶ್ರೀಗಳು ಪ್ರಶಾಂತವಾಗಿ ಹರಿವ ನಿರಂತರತೆಯ ಜಲಧಾರೆ. ಮೆಲ್ಲಮೆಲ್ಲನ ಸುರಿವ ಹನಿಗಳು ಮಣ್ಣಿನಾಳಕ್ಕಿಳಿದು ಅಲ್ಲೆಲ್ಲ ತಂಪರಡುತ್ತವೆ. ಧೋಗುಟ್ಟು ಸುರಿವ ನೀರು ತಾನುಬಿದ್ದ ತಾಣವನ್ನೆಲ್ಲ ಕೊಚ್ಚಿಕೊಂಡೇ ಸಾಗುತ್ತದೆ; ಅಲ್ಲೇನೂ ಉಳಿಸದಂತೆ. ಶ್ರೀಗಳ ಬಹುಮುಖ ವ್ಯಕ್ತಿತ್ವ ಧುಮ್ಮಿಕ್ಕಿ ಭೋರ್ಗರೆವ ಜಲಪಾತವಲ್ಲ. ಜುಳುಜುಳು ಸುಸ್ವರನಾದಗೈವ ಪುಣ್ಯ ಸಲಿಲ. ಶ್ರೀಗಳು ಯುಗಪುರುಷರು.

ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿಮೊದಲಿರದನಂತತೆಯ ಮರೆಗೆ
ಇಂದುಗಳು ನಾಳೆಗಳು
ಹಿಂದೆ ಹಿಂದೋಡುವವು
ಏಣಿಕೆಗಳ ಸನಹುಗಳ ಮರೆಸುತ್ತ ಹಿಂದೆ...

ಎಂಬ ಕವಿಯೊಬ್ಬರ ಮಾತು ಈ ಸಂದರ್ಭದಲ್ಲಿ ನೆನಪಾಗುವುದು ಅರ್ಥಪೂರ್ಣವೆನಿಸುತ್ತದೆ. ಪ್ರಸ್ತುತದಲ್ಲಿ ಮನೆ ಮನೆಯ ಮಾತಾಗಿರುವ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಿರಕ್ತಾಶ್ರಮವನ್ನು ಸ್ವೀಕರಿಸಿ ಸಮಾಜಮುಖಿಯಾಗಿ ದುಡಿಯುತ್ತಿರುವ ತುಡಿಯುತ್ತಿರುವ ಈ ಸೇವಾಮಣಿಹಕೆ ನೂರು ತುಂಬಿ ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ.
ಕರ್ನಾಟಕ ಕೀರ್ತಿಯ ಕಳಸವಾಗಿರುವ ಶ್ರೀ ಸಿದ್ಧಗಂಗಾ ಮಠವು ವಿಚಾರವಾದಿ, ಸಮತಾವಾದಿ ಬಸವಣ್ಣನವರ ಜೀವನ ಮೌಲ್ಯಗಳ ಪ್ರಾತಿನಿಕ ಪ್ರಯೋಗಶಾಲೆಯೇ ಆಗಿದೆ. `ನೀರಿಂಗೆ ನೈದಿಲಿಯೇ' ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ. ಸಮುದ್ರಕ್ಕೆ ತೆರೆಯೇ ಶೃಂಗಾರ ಶರಣನಾ ನೊಸಲಿಂಗೆ ವಿಭೂತಿಯೇ ಶೃಂಗಾರ' ಎಂಬ ವಚನೋಕ್ತಿಯಂತೆ ಶ್ರೀ ಸಿದ್ಧಗಂಗಾ ಕ್ಷೇತ್ರದ ಸಾಧನೆಯ ಸಹ್ಯಾದ್ರಿಗೆ ಸಹನಾಸಿರಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳೇ ಶೃಂಗಾರ ಪ್ರಾಯರು ಎಂದರೆ ಅತಿಶಯೋಕ್ತಿಯಾಗಲಾರದು.

ಉರಿವ ಸೂರ್‍ಯನ ಮೈ ಎತ್ತೆತ್ತ ನೋಡಿದರೂ ತಾನುರಿದು ಬೆಳಕ ಬೀರುವುದೇ ಅದರ ನೈಜ ಸ್ವಭಾವ. ಅಂತೆಯೇ ಶ್ರೀಗಳ ಕಾರ್‍ಯಚಟುವಟಿಕೆಗಳನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಪ್ರಜ್ವಲಮಾನ್ಯ ಪ್ರಖರ ಕಿರಣಬೀರುವಂತಹವು.
ಕಾಯಕ ಕ್ಷೇತ್ರದಲ್ಲಿ ಶ್ರೀಮಠದ ವ್ಯಾಪ್ತಿ ಬಹುವಾದುದು. ಕಾಯಕ ಕ್ಷೇತ್ರಕ್ಕೂ ಧಾರ್ಮಿಕ ಮೆರುಗನ್ನು ನೀಡಿರುವ ಶ್ರೀಗಳ ಕುರಿತು ಹೇಳುವಾಗ ಶರಣರ ವಿಚಾರಧಾರೆ ಸುರಣಿಗೊಳ್ಳುತ್ತವೆ.

`ಗುರು ಲಿಂಗಜಂಗಮವಾದರೂ ಕಾಯಕದಿಂದಲೇ ಮುಕ್ತಿ'
`ನೆರೆಮನೆಗೆ ಹೋಗಿ ತನ್ನುದರದ ಹೊರೆಯದ ಅಚ್ಚ ಶರಣನ ಕಂಡರೆ
ನಿಶ್ಚಯವಾಗಿ ಕೂಡಲ ಸಂಗಯ್ಯನೆಂಬೆ '
`ಕಾಯಕ ನಿರತನಾದೊಡೆ ಗುರುಲಿಂಗ ಜಂಗಮದ ಹಂಗ ಹರಿಯಬೇಕು'
`ಆವಾವ ಕಾಯಕವೆ ಮಾಡಿದರೂ ಬಸವೇಶ ಅವಗಂ ಶರಣರನು ಸೇವಿಪನು ಬಸವೇಶ'

ಕಾಯಕ ಕುರಿತ ಶರಣರ ಈ ಸಿದ್ಧಾಂತಗಳನ್ನು ಅಕ್ಷರಶಃ ಪರಿಪಾಲಿಸುತ್ತಿರುವ ಶ್ರೀ ಶ್ರೀಗಳು ಕಾಯಕ ಯೋಗಿಗಳೇ ಆಗಿದ್ದಾರೆ. ಆಲಸ್ಯತನ, ಬಡತನ, ನಿರುದ್ಯೋಗ ನಿರ್ಮೂಲನೆಗೆ ಕಾಯಕವೊಂದು ರಾಮಬಾಣ ಎನ್ನುತ್ತಾರೆ ಶ್ರೀಗಳು. ಉತ್ತಮ ವ್ಯಕ್ತಿತ್ವರೂಪುಗೊಳ್ಳುವುದು ಸತ್ಯ ಶುದ್ಧ ಕಾಯಕದಿಂದ ಮಾತ್ರ. `ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ. ತಂದಿಕ್ಕುವ ಶಿವಂಗೆ ಬಡತನವುಂಟೇ' ಈ ವಚನದ ಭಾವವನ್ನು ಅರಿತ ನಿರಾಳ ನಿಲುವಿನ ಅನುಭಾವಿ ಈ ಶಿವಯೋಗಿ.

`ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು
ಅನುಗೊಂಬನಿತುಂ ಕಾಯಕಂ ನಡೆಯುತ್ತಿರಬೇಕು'

ಎಂಬ ಈ ಮಾತಿನಲ್ಲಿ ನಂಬುಗೆಯಿತ್ತವರು. ಕಾಯಕವೆಂಬುದು ಜೀವನ ಮೌಲ್ಯದ ದ್ಯೋತಕ. ಕಾರ್ಯವಿಲ್ಲದೆ ಖಾಲಿಯಿರುವ ಮನಸ್ಸು ಪೂಜ್ಯರದಲ್ಲ. ಈ ಇಳಿವಯಸ್ಸಿನಲ್ಲೂ ಅವರ ಆತ್ಮದಲ್ಲುದುಗಿರುವ ಚಿರಯೌವ್ವನ, ಹುರುಪು, ಹುಮ್ಮಸ್ಸು, ಕಾರ್ಯಾಸಕ್ತಿಗಳು, ಕಾರ್ಯ ಯೋಜನೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದೀವಿಗೆಗಳು. ಅವರ ಈ ವ್ಯಕ್ತಿತ್ವವನ್ನು ನಾವು ಎಡಬಿಡದೆ ಪರಿಪಾಲಿಸಿದಲ್ಲಿ ಸುಖಸಮಾಜವೇ ನಿರ್ಮಾಣವಾದೀತು. ಈ ನಿಟ್ಟಿನಲ್ಲಿ ಶ್ರೀಮಠವು ಸದ್ದುಗದ್ದಲವಿಲ್ಲದೆ ಸಿದ್ಧಿ ಸಾಧನೆಗೈಯುತ್ತ ತನ್ನನ್ನು ತಾನು ಬೆಳಗಿಸಿಕೊಂಡು ಭಕ್ತಸಮೂಹವನ್ನು ಬೆಳಗಿಸುವ ನಂದಾದೀಪ. ಕಾಯಕ ನಿಷ್ಠೆಯಿಂದ ಅಸಾಧ್ಯವನ್ನು ಸಾಧ್ಯವಾಗಿಸಿದ ಮಹಾಮನೆಯ ಜೀವಂತ ಪ್ರತಿನಿಯಂತಿದೆ ಶ್ರೀ ಸಿದ್ಧಗಂಗಾ ಕ್ಷೇತ್ರವಿಂದು.

ನೀಳಕಾಯದ ದೇಹಕ್ಕೆ ನೂರು ತುಂಬಿರುವಾಗ ಈಗಲೂ ರಾತ್ರಿ ಎರಡು ಗಂಟೆಗೆ ಎಚ್ಚರಗೊಂಡು ಅಧ್ಯಯನನಿರತರಾಗಿ, ಪೂಜಾಕೈಂಕರ್ಯ ಸಲ್ಲಿಸಿ, ತನ್ನನ್ನೆ ನಂಬಿರುವ ಸಾವಿರ ಸಾವಿರ ಎಳೆಮನಸ್ಸುಗಳನ್ನು ಪ್ರಫುಲ್ಲಗೊಳಿಸಿ, ಭಕ್ತರನ್ನು ಸಂತೈಸಿ ಅವರ ಬೇಕುಬೇಡಗಳನ್ನು ಪೂರೈಸಿ ಉಳಿದ ನಿತ್ಯದ ಕಾರ್‍ಯಗಳತ್ತ ಮುಖಮಾಡುವ ಆ ದೇಹಕ್ಕೆ ದಣಿವಾಗುವುದಿಲ್ಲವೇ? ಇದು ಎಲ್ಲರ ಪ್ರಶ್ನೆ. ಶ್ರೀಗಳ ಜಪತಪಗಳೇ ವೈಶಿಷ್ಟ್ಯಮಯವಾದವು. `ಜಪಿಸಬೇಕು ಜಪಿಸಬೇಕು ಸತ್ಯಶೀಲವ, ಪರಹಿತವ, ಜಪಿಸಬೇಕು ಜಪಿಸಬೇಕು ಗುರು ಲಿಂಗ-ಜಂಗಮದಾಸೋಹವ' ಎಂಬ ಜೀವನ ಮಂತ್ರವನ್ನು ಸಕಲರಿಗೂ ಸಾರಿದ ಈ ಮಹಾನ್ ವ್ಯಕ್ತಿತ್ವದ ಎದುರಲ್ಲಿ ದಣಿವು ಶಿರಬಾಗಿಬಿಡುತ್ತದೆ.

ವಿದ್ಯಾನಾಮ ನರಸ್ಯರೂಪಮಕಂ ಪ್ರಚ್ಛನ್ನಗುಪ್ತಂ ಧನಂ
ವಿದ್ಯಾಭೋಗಖರಿ ಯಶಸ್ಸುಖಖರಿ ವಿದ್ಯಾಗರೂಣಾಂ ಗುರುಃ
ವಿದ್ಯಾಬಂಧು ಜನೋವಿದೇಶಗಮನೆ ವಿದ್ಯಾಪರಾಃ ದೇವತಾಃ
ವಿದ್ಯಾರಾಜಸುಪೂಜ್ಯತೇ ನತುಧನಂ ವಿದ್ಯಾ ವಿಹೀನ ಪಶುಃ

ಈ ಶ್ಲೋಕವು ವಿದ್ಯೆಯ ಮಹತ್ವವನ್ನು ತೋರುತ್ತಿದೆ. ಶಿಕ್ಷಣವು ಸಾಂಸ್ಕೃತಿಕ ಕ್ರಿಯೆಯ ಮೂಲಧಾತು. ವ್ಯಕ್ತಿತ್ವ ವಿಕಸನಕ್ಕೆ ಹಾದಿ. ಅನಕ್ಷರತೆ ಬದುಕನ್ನು ಹಾಳುಗೆಡವುತ್ತದೆ. ವಿದ್ಯೆಯಿಲ್ಲದವನು ಪಶುವಿಗೆ ಸಮಾನ ಎನ್ನುತ್ತಾರೆ. ಶೈಕ್ಷಣಿಕ ಚಿಂತನಾಗಾರವಾಗಿರುವ ಶ್ರೀಮಠದ ಕಾರ್‍ಯವೈಖರಿ ಭಾರತಕ್ಕೆ ತಾನು ನೀಡಿರುವ ಅಮೂಲ್ಯ ಕೊಡುಗೆ. ದಾನದಾನಕ್ಕಿಂತ ವಿದ್ಯಾದಾನ ದೊಡ್ಡದು. ಬಡ, ದೀನದಲಿತ ವಿದ್ಯಾರ್ಥಿಗಳೇ ಶ್ರೀಮಠದ ಆಸ್ತಿ. `ಪರೋಪಕಾರಾರ್ಥಂ ಇದಂ ಶರೀರಂ' ಎಂಬಂತೆ ಭಾರತದ ಭವ್ಯ ಪ್ರಜೆಗಳ ನಿರ್ಮಾಣಕ್ಕಾಗಿಯೇ ಗಂಧದ ಕೊರಡಿನಂತೆ ಜೀವ ಸವೆಸುತ್ತಾ ಅಹರ್ನಿಶಿ ದುಡಿಯುತ್ತಿರುವುದು ಸರ್ವವಿತ. `ಕುಲದಲ್ಲಿ ಶೂದ್ರನಾದಡೇನು? ಮನದಲ್ಲಿ ಮಹದೇವ ನೆಲೆಗೊಂಡವನೇ ವೀರಶೈವ ನೋಡಾ' ಎಂಬ ಉಕ್ತಿಯನ್ನು ಮಣಿಹದಲ್ಲಿ ಹೊತ್ತು ದಶಕ ದಶಕಗಳಿಂದಲೂ ಲೇಸ ಸಾರುವ ಶ್ರೇಷ್ಠ ಕುಲಜರಾಗಿದ್ದಾರೆ. ಪೂಜ್ಯರು. ಆದರ್ಶಯುತ ಮಹಾಮಠಾಶರಾಗಿ ವ್ಯಕ್ತಿ ಕಲ್ಯಾಣದೊಂದಿಗೆ ವಿಶ್ವ ಕಲ್ಯಾಣ ಕಾಣುವ ವಿಶ್ವಪ್ರೇಮಿಗಳು. ಎಲ್ಲ ಹೃದಯದೊಳು ಲೋಕ ಪ್ರೀತಿಯ ಬೆಳಕಬೀರಿ ` ಇವ ನಮ್ಮವ ಇವ ನಮ್ಮವ' ನೆಂದು ಎಲ್ಲರನ್ನು ಅಪ್ಪಿ ಒಪ್ಪಿಕೊಳ್ಳುವ ವಿಶ್ವಚೇತನರು. ಜಾತಿಮತ ಧರ್ಮ ಪಂಗಡ ಬಡವ ಬಲ್ಲಿದ. ಮೇಲು ಕೀಳು ಕುಲಪಂಗಡಗಳನ್ನು ಬದಿಗೊತ್ತಿ ಮಕ್ಕಳ ಬಾಳಬುತ್ತಿಗೆ ಸವಿತುಂಬುತ್ತಿರುವ ಇವರು ಸರ್ವಧರ್ಮ ಸಮನ್ವಯರು.

ನಮ್ಮದು ಜಾತ್ಯತೀತ ರಾಷ್ಟ್ರವೆಂಬ ಮಾತನ್ನು ಸೃಜಗೊಳಿಸಿರುವವರೇ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು. ಅನ್ನದಾನದೊಂದಿಗೆ ಸಹಸ್ರ ವಿದ್ಯಾರ್ಥಿಗಳಿಗೆ ಅರಿವಿನ ದಾನವನ್ನು ನೀಡುತ್ತಾ ತೆರೆಯೊಳಗೆ ಸುರಪುರವನ್ನು, ನರನೊಳಗೆ ಹರನನ್ನು ಕಾಣುವ ಅವರ ದೃಷ್ಟಿಕೋನವೇ ಅಮೋಘವಾದುದು. ಆದೆಷ್ಟೋ ಬಾರಿ ವಿದ್ಯಾರ್ಥಿಗಳ ಮುಂದಲೆ ನೇವರಿಸಿ ತಾವೇ ತಮ್ಮ ಕೈಯಾರ ಉಣಬಡಿಸಿದ ಮಾತೃವಾತ್ಸಲ್ಯಮಯಿ, ಸಾಮಾನ್ಯವಾಗಿ ಸರಸ್ವತಿ-ಅನ್ನಪೂರ್ಣೆಯರು ಒಂದೆಡೆ ಒಗ್ಗೂಡುವುದೇ ಬಹು ಅಪರೂಪವಾಗಿರುವ ಈ ಸಂದರ್ಭದಲ್ಲಿ ಇಬ್ಬರೂ ನಗುನಗುತ್ತಾ ಇಲ್ಲಿ ನೆಲೆಯೂರಲು ಶ್ರೀಗಳ ಆತ್ಮಬಲವೇ ಮುಖ್ಯವಾಗಿದೆ.
ಲೌಕಿಕದಲ್ಲಿ ಅಲೌಕಿಕತೆಯನ್ನು ಕಂಡವರು. ತಮ್ಮ ಸಾತ್ವಿಕ ಮತ್ತು ತಾತ್ವಿಕತೆಯಿಂದ ವೈಜ್ಞಾನಿಕ ಮತ್ತು ಧಾರ್ಮಿಕತೆಯ ಸಾಮರಸ್ಯವನ್ನು ಬೆಸೆದವರು. ಪೂಜ್ಯರ ಮಾತುಗಳು ಸ್ಪಷ್ಟ ನೇರ ನಿಖರ ವಾಣಿಗಳು. `ನ್ಯಾಯ ನಿಷ್ಠೂರಿ ಶರಣ ಲೋಕವಿರೋ, ಶರಣ ಯಾರಿಗೂ ಅಂಜನು' ಎಂಬ ಮಾತಿನಂತೆ ತಮ್ಮ ಮಾತಿನ ಸಂಸ್ಕಾರ ಜ್ಯೋತಿಯಿಂದ ಸರ್ವರನ್ನು ಬೆಳಗಿಸುವ ಮಹಿಮರು.

ನಿಸರ್ಗ ಸರಳ ಸಹೃದಯಿಯಾದ ಶ್ರೀಗಳು ಸಾಮಾಜಿಕ ಚಿಂತಕರು. `ಸರ್ವೇ ಜನಾಃ ಸುಖಿನೋ ಭವಂತು' ಎಂಬ ಗಂಭೀರ ಚಿತ್ತರು. ಪಾಂಡಿತ್ಯ ಪ್ರಭಂಜನರು. ನೀತಿಗೆ ಸೆಲೆಯಾಗಿ ನೇತ್ಯಾತ್ಮಕವನ್ನು ಎತ್ತಿ ಹಿಡಿದವರು. ಸೂರ್ತಿಯ ನೆಲೆಯಾದವರು. ವಿದ್ವತ್ ಸಂಪನ್ನರು. ನಡೆನುಡಿಯ ಸಮಚಿತ್ತರು ಎಂಬ ವಚನದಂತೆ ಆತ್ಮನ್ವೇಷಣೆಗೆ ಆದ್ಯತೆ ನೀಡುತ್ತಲೇ ಅನ್ಯರನ್ನು ಆತ್ಮಚಿಕಿತ್ಸೆಗೆ ಅಣಿಗೊಳಿಸುವ ಚಿಕಿತ್ಸಕರು.

ಲೋಕಕಲ್ಯಾಣ ಪರವಾದ ಅವರ ಉಪದೇಶದ ನುಡಿಗಳಿಗೆ ಸೋಲದವರಿಲ್ಲ. ಅವರ ಅನುಗ್ರಹ ನುಡಿಗಳು ಸೂಜಿಗಲ್ಲಂತೆ ಆಕರ್ಷಕ. ಭಾರತದ ಗತ ಬದುಕಿನ ಸ್ಥಿತಿಗಳನ್ನು ಸ್ಮರಿಸುತ್ತಾ ಪ್ರಸ್ತುತಕ್ಕೆ ಹೋಲಿಸುವ ಆ ಗಂಭೀರ ಚಿಂತನೆಯ ಧಾಟಿ ಕೇಳುಗರ ಒಳಗಣ್ಣನ್ನು ತೆರೆಯುವಂತೆ ಉತ್ತೇಜನಕಾರಿಯಾಗಿರುತ್ತದೆ. ಸಮ್ಯಕ್ ದೃಷ್ಟಿಯುಳ್ಳ ಪೂಜ್ಯರದು ವಿಚಾರಮಂಡನೆಗಿಂತ ಆಚಾರಕ್ಕೆ ಆದ್ಯತೆ ನೀಡುವಂಥದ್ದು. ಇವರು ಪ್ರಶಾಂತವಾಗಿ ಹರಿವ ನಿರಂತರತೆಯ ಜಲಧಾರೆ. ಮೆಲ್ಲಮೆಲ್ಲನ ಸುರಿವ ಹನಿಗಳು ಮಣ್ಣಿನಾಳಕ್ಕಿಳಿದು ಅಲ್ಲೆಲ್ಲ ತಂಪರಡುತ್ತವೆ. ಧೋಗುಟ್ಟು ಸುರಿವ ನೀರು ತಾನುಬಿದ್ದ ತಾಣವನ್ನೆಲ್ಲ ಕೊಚ್ಚಿಕೊಂಡೇ ಸಾಗುತ್ತದೆ; ಅಲ್ಲೇನೂ ಉಳಿಸದಂತೆ. ಶ್ರೀಗಳ ಬಹುಮುಖ ವ್ಯಕ್ತಿತ್ವ ಧುಮ್ಮಿಕ್ಕಿ ಭೋರ್ಗರೆವ ಜಲಪಾತವಲ್ಲ. ಜುಳುಜುಳು ಸುಸ್ವರನಾದಗೈವ ಪುಣ್ಯ ಸಲಿಲ. ಶ್ರೀಗಳು ಯುಗಪುರುಷರು. ಆದರ್ಶಮುಕುಟರು, ಜನಮಾನಸದಲ್ಲಿ ಅಭಿನಂದನೀಯರು. ಮೈಮನದ ತುಂಬೆಲ್ಲ ತ್ರಿವಿಧ ದಾಸೋಹವನ್ನು ಲೀನವಾಗಿಸಿಕೊಂಡ ಈ ಮಹಾಮಣಿಹದ ಸಮಕಾಲೀನರಾಗಿ ತಾವು ಇರುವುದೇ ನಮ್ಮ ಸುಕೃತ ಫಲ.

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ
ನೊರೆವಾಲೊಳಗೆ ತುಪ್ಪವನು ಕಂಪಿಲಲ್ಲದಂತಿರಿಸಿದೆ.
ಶರೀರದೊಳಗೆ ಆತ್ಮನ ಕಾಣದಂತಿರಿಸಿದೆ
ನೀನು ಬೆರೆಸಿದ ಭೇದಕ್ಕೆ ಬೆರಗಾದೆನಯ್ಯಾ ರಾಮನಾಥ !

ಇಲ್ಲಿ ಬರುವ, ನೊರೆವಾಲು, ಮರ, ಶರೀರ ಇವೆಲ್ಲವೂ ಧೃಗ್ಗೋಚರ ಭೌತಿಕ ಸಾಧನಗಳು. ಇವುಗಳ ಅಂತರ್‍ಯದ ಶಕ್ತಿ, ತುಪ್ಪ, ನೊರೆವಾಲು, ಆತ್ಮಗಳು ದೃಷ್ಟಿಗೆ ತೋರವು. ಜೀವಕರ್ಮ ಮತ್ತು ಆತ್ಮ ಧರ್ಮ ಎರಡೂ ಇಲ್ಲಿ ಮೇಳೈಸಿವೆ. ಸೃಷ್ಟಿ ಮತ್ತು ಸೃಷ್ಟೀಶರ ಧರ್ಮಗಳೆರಡನ್ನು ಅರಿಯಲು ಜ್ಞಾನ-ಕ್ರಿಯಾನುಭವಬೇಕು. ಇವೆಲ್ಲವು ಶ್ರೀಗಳ ಸ್ವಪ್ರಜ್ಞೆಗಷ್ಟೇ ವೇದ್ಯವಾಗುವಂಥವು. ಮಾತು ಮನಂಗಳಿಗಾತೀತವಾದ ಇವರ ಅಧ್ಯಾತ್ಮಿಕ ಕ್ರಿಯಾಶೀಲ ಬದುಕಿಗೆ ಅನ್ವಯಿಸುವಂತವು.

ಗ್ರಾಮೀಣ ಬದುಕೆಂದರೆ ಶ್ರೀಗಳ ಹೃದಯ ತುಂಬಿ ಬರುತ್ತದೆ. ಜನಪದರ ಜೀವಂತಿಕೆಯ ಸಾರವಿರುವುದೇ ಅಲ್ಲಿ. ಬಸವ ಜಯಂತ್ಯೋತ್ಸವಗಳು ಸಭೆ ಸಮಾರಂಭಗಳನ್ನು ಭಕ್ತರು ತುಂಬು ಹೃದಯದಿಂದ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಆಚರಿಸುವಂಥದ್ದನ್ನು ಎಲ್ಲರೂ ಬಲ್ಲರು. ಶ್ರೀಗಳ ಕೃಪಾಶೀರ್ವಾದದಿಂದ ಅವರ ದಿವ್ಯ ಸಾನ್ನಿಧ್ಯದಲ್ಲಿ ಮೊಟ್ಟ ಮೊದಲಬಾರಿಗೆ ಮಾತನಾಡುವ ಅವಕಾಶವೊಂದನ್ನು ಸಕಲೇಶಪುರ ತಾಲೂಕಿನ ಹುಲ್ಲುಹಳ್ಳಿಯ ಶರಣವೃಂದವು ಕಲ್ಪಿಸಿಕೊಟ್ಟಿತ್ತು. ಅಂದು ಅದೊಂದು ನನ್ನ ಬದುಕಿನ ಶುಭದಿನವೆಂದೇ ಹೇಳಬೇಕು. ಆ ದಿನವನ್ನು ನಾನೆಂದೂ ಮರೆಯಲಾರೆ. ಸಕಲೇಶಪುರ ತಾಲೂಕಿನ ಬಸವ ಜಯಂತಿ ಹಾಗೂ ಆ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾದ ದೇವಾಲಯವೊಂದರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಶರಣ ಬಾಂಧವರು. ಆ ಸಭೆಯ ವೇದಿಕೆಯಲ್ಲಿ ಆಸೀನರಾಗಿದ್ದ ಗುರುಗಳನ್ನು ನಾನು ಆರಂಭದಿಂದಲೂ ಗಮನಿಸುತ್ತಿದ್ದೆ. ಬಹುಶಃ ಎಲ್ಲ ಸಭೆಯಲ್ಲೂ ನನ್ನಂತೆಯೇ ಬಹುಜನರಿಗೆ ಇದು ಅನುಭವವೇದ್ಯ ಎನಿಸುತ್ತದೆ. ಅವರ ಬಾಗಿದ ಶಿರ, ಮುಚ್ಚಿದ ಕಣ್ಣು ಕಂಡು ಬಹುಶಃ ನಿದ್ರಾದೇವಿ ಅವರನ್ನು ಆವರಿಸಿರುವಳೆಂದೇ ಭಾವಿಸಿದ್ದೆ. ನನ್ನ ಮಾತು ಮುಗಿದ ನಂತರವೂ ಅವರ ಭಂಗಿಯಲ್ಲೇನೂ ಬದಲಿರಲಿಲ್ಲ. ಅವರ ದಿಟ್ಟಿಯು ಹಾಗೆಯೇ ಕೆಳಗಿತ್ತು. ಆಗಾಗ್ಗೆ ಕೆಲವು ಹಿರಿಯರು ಮತ್ತು ಭಕ್ತವೃಂದ ಶ್ರೀಗಳ ಬಗ್ಗೆ ಹೀಗೆ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಈಗಲೂ ಆ ನುಡಿಗಳನ್ನು ಕೇಳುತ್ತಲೇ ಇದ್ದೇನೆ. ಡಾ. ಶ್ರೀ ಶ್ರೀ ಸಿದ್ಧಗಂಗಾ ಶ್ರೀಗಳ ಕಣ್ಣೋಟದ ಕೃಪಾದೃಷ್ಟಿ ನಮ್ಮೆಡೆಗೆ ಕ್ಷಣಮಾತ್ರವೇ ಆಗಲಿ ಬೀರಿತೆಂದರೆ ನಮ್ಮ ಬಾಳು ಸಾರ್ಥಕ ಎಂದು. ಅವರ ದಿವ್ಯದೃಷ್ಟಿಯ ಬಗ್ಗೆ ಭಕ್ತ ಸಮೂಹಕ್ಕೆ ಇಂತಹ ಪೂಜ್ಯ ಗೌರವ ಭಾವನೆ ಉಂಟು. ಆ ಭಾವನೆಯೇ ನನ್ನಲ್ಲೂ ಮೊಳೆತಿದೆ. ಆದರೆ ಗುರುಗಳು ನಿದ್ರೆಗೈದಿದ್ದಾರಲ್ಲ ಎಂದು ತಿಳಿದು ಒಳಗೊಳಗೆ ವ್ಯಥಿಸಿದ್ದೆ. ಆನಂತರ ಕಾರ್‍ಯಕ್ರಮ ಅಂತಿಮಘಟ್ಟಕ್ಕೆ ಬಂದಾಗ ಶ್ರೀಗಳು ಉಪದೇಶಿಸುವ ಸರದಿ ಬಂದಿತು. ಭಕ್ತಿಪೂರ್ವಕವಾಗಿ ಅವರಿಗೆ ಮನದಲ್ಲಿ ನಮಿಸುತ್ತಾ ಮೈಯೆಲ್ಲ ಕಿವಿಯಾಗಿ ಕುಳಿತೆ. ಆಗ ಅರಿವಾಯಿತು ಅವರೊಳಗಿನ ಚಿತ್ತದ ಮಹಿಮೆ. ಅವರ ಮೌನಧ್ಯಾನದೊಳಗಿನ ಶ್ರೋತೃಭಾವಕ್ಕೆ ಬೆಕ್ಕಸ ಬೆರಗಾಗಿದ್ದೆ. ಅಂದಿನ ಸಭೆಯಲ್ಲಿ ಮಾತನಾಡಿದ ಎಲ್ಲರ ಮಾತುಗಳನ್ನು ಕ್ರೋಡೀಕರಿಸಿದ ವಿಶ್ಲೇಷಣಾತ್ಮಕ ವಿವರಣೆ ಅವರು ನೀಡಿದಾಗ ದಂಗಾಗಿ ಹೋಗಿದ್ದೆ. ಈ ರೀತಿ ಸುತ್ತಣ ಏನು ನಡೆದರೂ ನೋಡಿಯೂ ನೋಡದಂತಿರುವ, ಮಾಡಿಯೂ ಮಾಡದಂತಿರುವ ಅದ್ಭುತ ಶಕ್ತಿ ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಮಾತ್ರ ಸಾಧ್ಯವಾಗುವ ಮಾತು. ದೇವರ ದಾಸಿಮಯ್ಯ `ಘಟದೊಳಗೆ ತೋರುವ ಸೂರ್‍ಯನಂತೆ. ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು? ಸರ್ವರಿಗೆ ಸಾಧ್ಯವಲ್ಲ. ಮುಟ್ಟಿ ಮುಟ್ಟದು. ಅದಕೂಡುವವರೆ ಗುರುವಿನಿಂದಲ್ಲದಾಗದು' ಎಂದು ಗುರು ಮಹಿಮೆಯನ್ನು ಹೊಗಳಿದ್ದಾನೆ. ಆ ಆತ್ಮ ಸಾಕ್ಷಾತ್ಕಾರ, ಆ ಆತ್ಮಬಲ ಶ್ರೀ ಗುರುವಿನಿಂದಲೇ ಸಾಧ್ಯ.

ಸಮಾಜದ ಮೂಲ ಘಟಕ ಕುಟುಂಬವೇ. ಗುರುಗಳು ಸ್ತ್ರೀಪರ ಚಿಂತಕರೂ ಅಹುದು.`ಮಾಯೆಯನ್ನು ಮಹಾದೇವಿ' ಎಂದು ಕರೆದ ಬಸವಣ್ಣನವರ ಕಟ್ಟಾನುಯಾಯಿಗಳು. `ಗೃಹಿಣಿಂ ಗೃಹಮುಚ್ಛತೆ' ಎಂಬ ಮಾತಿನಿಂದ ಗೌರವಿಸಿ ಜತೆಯಲ್ಲೆ ಮಹಿಳಾ ಸಂಕುಲಕ್ಕೂ ಸ್ವಾಭಿಮಾನ, ಆತ್ಮಗೌರವ, ಆರೋಗ್ಯಪೂರ್ಣ ಸ್ವಾತಂತ್ರ್ಯದ ಅರಿವನ್ನು ಎತ್ತಿ ಹಿಡಿಯುತ್ತಾರೆ. ಸಭೆ ಸಮಾರಂಭಗಳಲ್ಲಿ ಮಹಿಳಾ ವ್ಯಕ್ತಿತ್ವಕ್ಕೂ ಆದ್ಯತೆ ನೀಡಿ ಅವರ ಮನೋಸ್ಥೈರ್‍ಯವನ್ನು ಬಲಪಡಿಸುತ್ತಾರೆ. ಹೆಣ್ಣು ಮಕ್ಕಳಿಗೆ ಇರಬೇಕಾದ ವ್ಯಕ್ತಿಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ. ಹೆಣ್ಣು ಹೆಣ್ಣಲ್ಲ. ಹೆಣ್ಣು ರಕ್ಕಸಿಯಲ್ಲ, ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ. ನಡುವೆ ನುಳಿವಾತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಆದಾವ ಲಿಂಗ ಎಂದು ನುಡಿದ ಶರಣರ ನುಡಿಗಳನ್ನು ಸಾರ್ಥಕಗೊಳಿಸಿದ್ದಾರೆ. ಶ್ರೀಮಠಕ್ಕೆ ವೈಚಾರಿಕ ಅಭಿರುಚಿ ಆಸಕ್ತಿಯಿರುವ ಮಹಿಳೆಯರನ್ನು ಆಹ್ವಾನಿಸಿ ಅವರ ವಿಚಾರಧಾರೆಗೆ ಅವಕಾಶ ಕಲ್ಪಿಸಿ ಕೊಡುತ್ತಿರುವುದು ಹೊಸದೇನೂ ಅಲ್ಲ. ಇದು ಶ್ರೀ ಶ್ರೀಗಳವರ ಈ ವೈಚಾರಿಕತೆಯ ದ್ಯೋತಕ. ಗುರುಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸ್ತ್ರೀ ಕುಲವೂ ಸಾರ್ಥಕ.

ಮನುಕುಲದ ಯಾರೇ ಆಗಲಿ ಅವರ ಬದುಕು ಸಾರ್ಥಕವಾಗಬೇಕಾದರೆ ಜೀವನದಲ್ಲಿ ಒಂದೊಮ್ಮೆಯಾದರೂ ಕರ್ನಾಟಕ ತವನಿ ತುಮಕೂರಿನ ಶ್ರೀ ಸಿದ್ಧಗಂಗಾ ಕ್ಷೇತ್ರವನ್ನು ದರ್ಶಿಸಬೇಕು. ಸಿದ್ಧಗಂಗಾತಿಲಕ ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಒಂದರೆಗಳಿಗೆಯಾದರೂ ಇದ್ದು ಬರಬೇಕು. ಆಗ ದೊರಕುವ ಅನಿರ್ವಚನೀಯ ಆನಂದವೇ ಅದ್ಭುತ. ಭಕ್ತಿ ರಸಾನುಭೂತಿ ತಂತಾನೆ ಚಿಮ್ಮುತ್ತದೆ. ದೈವಾಂಶ ಕಳೆಹೊತ್ತ ಆ ಕಾಯದ ಮುಂದೆ ನಾವು ಇಹವನ್ನೇ ಮರೆತುಬಿಡುತ್ತೇವೆ. ಅಂತಹ ಸಾತ್ವಿಕ, ತಾತ್ವಿಕ ದಾರ್ಶನಿಕ ಸಾಹಿತ್ಯ ಸೇವಕ. ವಿಶ್ವಪ್ರೇಮಿ, ಮಹಾಮಾನವ. ಮಾತೃಹೃದಯಿ, ಕರುಣಾ ಬಂಧು, ದಯಾಸಿಂಧು, ಚಿಂತನಶೀಲ, ಅವಿಶ್ರಾಂತ ದುಡಿಮೆಗಾರ, ಶಾಂತ ಸಂಯಮಶೀಲ ಊರ್ದ್ವಮುಖಿಗೆ ಮತ್ತೊಮ್ಮೆ ಭಕ್ತಿಪೂರ್ವಕ ನಮನಗಳು.

ಸುಶೀಲ ಸೋಮಶೇಖರ್‍

No comments: