Friday, November 28, 2008

ವಿರಕ್ತಿಯ ಶಿಖರಕ್ಕೆ ಏರಿದ ವೀರಾಪುರ ಬಾಲಕ

ಶಿವಣ್ಣನವರು ಬಾಲ್ಯದಲ್ಲಿಯೇ ಸಿದ್ಧಗಂಗೆಯ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು. ಬೆಟ್ಟವನ್ನೇರಿ ಸಿದ್ಧಲಿಂಗೇಶ್ವರ ಮೂರ್ತಿಯೆದುರು ಜಲತೀರ್ಥವಿರುವ ಅಮ್ಮನವರ ಗವಿಯಲ್ಲಿ ಕುಳಿತು ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಬೆಟ್ಟವನ್ನೇರಿ ಕುಣಿದಾಡುತ್ತಿದ್ದರು. ಸಿದ್ಧಗಂಗಾ ಬೆಟ್ಟದ ಮೂಲೆ ಮೂಲೆಗಳ ಪರಿಚಯ ಮಾಡಿಕೊಂಡರು. ದಿನಕಳೆದಂತೆ ಸಿದ್ಧಗಂಗೆಯ ಮೇಲಿನ ಮಮತೆ ಅಧಿಕವಾಗತೊಡಗಿತು.

ಲೌಕಿಕದ ಎಲ್ಲವುಗಳಿಗೆ ಅತೀತವಾಗಿ ನಿರ್ಮೋಹ, ನಿರಂಹಂಕಾರ, ನಿಷ್ಕಾಮ ಮನೋಭಾವದಿಂದ ದೇಶ ಸೇವೆಯೇ ಈಶ ಸೇವೆ ಎಂದು ಕಾರ್ಯ ನಿರ್ವಹಿಸುವವರೇ ಶ್ರೇಷ್ಠ, ಸಾತ್ವಿಕ ವ್ಯಕ್ತಿ. ಮನಸ್ಸು, ಮಾತು, ಕೃತಿಯಲ್ಲಿ ಸರ್ವಸಮರ್ಪಣ ಭಾವದಿಂದ ಸೇವೆ ಸಲ್ಲಿಸುವ ಈ ವ್ಯಕ್ತಿಗಳು ಸಮಾಜವನ್ನು ಕಾಡುವ ದಾರಿದ್ರ್ಯ, ಅಸಮಾನತೆ, ಅಜ್ಞಾನ, ಅಂಧ ಶ್ರದ್ಧೆ, ಅನಕ್ಷರತೆ ಮುಂತಾದ ಅನಂತ ಸಮಸ್ಯೆಗಳ ನಿವಾರಣೆಗೆ ಟೊಂಕ ಕಟ್ಟಿ ಉದಾತ್ತವಾಗಿ ಸ್ಪಂದಿಸುತ್ತಾರೆ. ಅರಿಷಡ್ವರ್ಗಗಳನ್ನು ಬದಿಗೊತ್ತರಿಸಿ ಸಮಸ್ತ ಜೀವ ಸಂಕುಲದ ಅಭ್ಯುದಯಕ್ಕೆ, ಶ್ರೇಯಸ್ಸಿಗೆ , ಸಮಾಜದ ಸರ್ವಾಂಗೀಣ ಪ್ರಗತಿಗೆ ನಿರ್ಮಲ ಅಂತಃಕರಣದಿಂದವರು ಸಲ್ಲಿಸುವ ದಾನ, ಮೃದು ಮನ ಚಿತ್ತ ದಿಂದ ನೀಡುವ ಸಾಂತ್ವನವೇ ಪರಿಶುದ್ಧ ಸೇವೆ. ಈ ಎಲ್ಲಕ್ಕೂ ಅನ್ವಯವಾಗುವ ಮಹಾ ಪುರುಷ , ಆತ್ಮೋದ್ಧಾರದೊಡನೆ ಲೋಕೋದ್ಧಾರ ಮಾಡುತ್ತಿರುವ ಮಾನವ ಚೇತನದ ಪ್ರೇರಕ ಶಕ್ತಿ, ಮಹಾನ್ ಸಂತ ತುಮಕೂರು ಶ್ರೀ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ.
ಸಮಾಜವನ್ನು ಸಂಸ್ಕರಿಸುವ ಕ್ರಾಂತಿಯೊಂದಿಗೆ, ಕೆಳ ಸ್ತರದ ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಂನ್ಯಾಸಿಯೊಬ್ಬರು ಧರ್ಮ ಕರ್ತವ್ಯಾಭಿಮುಖರಾದರೆ ಎಂಥೆಂಥ ಅದ್ಭುತಗಳನ್ನು ಸೃಷ್ಟಿಸಿಬಿಡುತ್ತಾರೆ ಎಂಬುದಕ್ಕೆ ಶ್ರೀಗಳೇ ಸಾಕ್ಷಿ. ಸುದೀರ್ಘ ಸಾಧನೆಯ ಇಂಥ ಹೊಳಹು ಮೂಡಿ ಬಂದ ಬಗೆ, ಅದು ವಿಸ್ತಾರಗೊಂಡು ಜಗದಗಲಕ್ಕೆ ವ್ಯಾಪಿಸಿದ ಪರಿ ಖಂಡಿತಾ ಪವಾಡವಲ್ಲ. ಅದು ವಿರಕ್ತಿಯ ಶಿಖರ ಮುಟ್ಟಿದ ಸಾಧಕನ ಪುರೋಭಿವೃದ್ಧಿಯ ಮಾರ್ಗ.

ಪೂರ್ವಾಶ್ರಮ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರ ಎಂಬುದು ಶಿವಶರಣರ ಪುಣ್ಯಕ್ಷೇತ್ರಗಳ ಮಧ್ಯದಲ್ಲಿರುವ ವ್ಯವಸಾಯ ಪ್ರಧಾನವಾದ ಒಂದು ಚಿಕ್ಕ ಹಳ್ಳಿ. ವೀರಾಪುರದ ಹೊನ್ನಪ್ಪ(ಹೊನ್ನೇಗೌಡರು) ಮತ್ತು ಗಂಗಮ್ಮ ದಂಪತಿಯ ೧೩ ಮಕ್ಕಳಲ್ಲಿ ಶಿವಣ್ಣ (ಈಗಿನ ಡಾ.ಶಿವಕುಮಾರ ಸ್ವಾಮೀಜಿ) ೧೯೦೮ರ ಏಪ್ರಿಲ್ ಒಂದರಂದು ಜನಿಸಿದರು.
ಶೀವಣ್ಣ ಬಹಳ ತುಂಟ. ಹೀಗಾಗಿ ಶಾಲೆಗೆ ಸೇರಿಸುವುದೇ ತಂದೆ ತಾಯಿಗಳಿಗೆ ಒಂದು ಚಿಂತೆಯಾಗಿತ್ತು. ಊರಿನಲ್ಲಿ ಸರಿಯಾದ ಶಾಲೆ ಇರಲಿಲ್ಲ. ಅನಿವಾರ್ಯವಾಗಿ ನಾಲ್ಕನೇ ವರ್ಷಕ್ಕೆ ಸಮೀಪದ ಕೂಲಿ ಮಠಕ್ಕೆ ಸೇರಿಸಲಾಯಿತು. ಎಂಟು ವರ್ಷಗಳವರೆಗೆ ವೀರಾಪುರ ಮತ್ತು ಪಕ್ಕದ ಪಾಲನಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು.
ಬಾಲ್ಯ ಎಂದಿನ ತುಂಟತನದಲ್ಲೇ ಕಳೆಯಿತು. ಮರ ಹತ್ತುವುದು, ಸ್ನೇಹಿತರೊಂದಿಗೆ ಅಡವಿ ಸುತ್ತುವುದು, ಕೆರೆಯಲ್ಲಿ ಈಜುವುದು, ಮರಕೋತಿ ಆಟವಾಡುವುದು...ಹೀಗೆ ನಾನಾ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲ. ಯಾವುದಕ್ಕೂ ಜಗ್ಗದ, ಎಂದಿಗೂ ಧೃತಿಗೆಡದ ವಿಶ್ವಾಸದ ಮನೋಭಾವವದು. ತಂದೆ ಸಾಕಿದ್ದ ಕುದುರೆಯನ್ನು ಆಗಾಗ ಸವಾರಿ ಮಾಡಿ ಎಲ್ಲರೂ ಬೆರಗುಗೊಳ್ಳುವಂತೆ ಮಾಡುತ್ತಿದ್ದರು. ವೆಂಕಟರಮಣಯ್ಯ ಎಂಬುವರು ಬಾಲ್ಯದ ಆಪ್ತ ಮಿತ್ರರು. ಗೊಲ್ಲರ ಬಾಲಯ್ಯ, ಆದಿಕರ್ನಾಟಕದ ರುದ್ರಯ್ಯ ಇವರ ಇನ್ನಿತರ ಸ್ನೇಹಿತರಾಗಿದ್ದರು.

ತುಂಟ ಹುಡುಗ
ಅತಿಥಿ ಸತ್ಕಾರ ಇವರ ಹುಟ್ಟುಗುಣ. `ಹೊನ್ನೇ ಗೌಡರ ಮನೆಗೆ ಈ ಮಗ ಅನ್ನವನ್ನು ಕಟ್ಟಿಕೊಂಡೇ ಹುಟ್ಟಿಬಂದಿದ್ದಾನೆ' ಎಂದು ಊರವರು ಮಾತನಾಡಿಕೊಳ್ಳುತ್ತಿದ್ದರು. ಅದು ನಿಜವೂ ಆಗಿತ್ತು. ಔದಾರ್ಯ, ಜನಪ್ರೀತಿ, ಕಾರ್ಯಶ್ರದ್ಧೆಗಳು ಹುಟ್ಟು ಗುಣಗಳಾಗಿ ಅವರೊಂದಿಗೆ ಬೆಳೆದು ಬಾಲ್ಯ ಜೀವನದ ಮರೆಯಲ್ಲಿ ಅಡಗಿದ ಮಹಾ ಮಾನವತೆಯ ಬೀಜಗಳಂತೆ ಅವ್ಯಕ್ತವಾಗಿದ್ದವು.
ಪ್ರಾಥಮಿಕ ವಿದ್ಯಾಭ್ಯಾಸ ಮುಗಿದ ಮೇಲೆ ಸ್ವಲ್ಪದಿನ ಗುಂಡಿಗೆರೆಯ ಕಿರಿಯ ಮಗಳು ಗೌರಕ್ಕನ ಮನೆಗೆ ಕಳುಹಿಸಿದರು. ಅಲ್ಲಿಯೂ ಇವರ ತುಂಟತನ ತಡೆಯಲಾಗಲಿಲ್ಲ. ದೊಡ್ಡ ಮಗಳು ಪುಟ್ಟಹೊನ್ನಮ್ಮನವರ ಮನೆಯಲ್ಲಿ ಬಿಡಲಾಯಿತು. ಜತೆಗಾರನಾಗಿ ಇರಲಿ ಎಂಬ ಕಾರಣಕ್ಕೆ ಲಿಂಗಪ್ಪ ಎಂಬ ಇನ್ನೊಬ್ಬ ಮಗನನ್ನು ಸಹ ಇಲ್ಲಿಯೇ ಬಿಡಲಾಯಿತು.
ತಮ್ಮೂರಿನ ಎ.ವಿ.ಸ್ಕೂಲಿಗೆ ಶಿವಣ್ಣನವರನ್ನು ಸೇರಿಸಿದಳು ಅಕ್ಕ. ಈ ಹೊತ್ತಿಗಾಗಲೇ ಶಿವಣ್ಣನವರ ತುಂಟಾಟಗಳು ಕಡಿಮೆಯಾಗಿದ್ದವು. ಶ್ರದ್ಧೆ ಓದುವತ್ತ ತಿರುಗಿತ್ತು. ಆಟ ಪಾಠಗಳಲ್ಲಿ ಯಾವಾಗಲೂ ಇವರದೇ ಮೇಲುಗೈ. ಇವರ ಪ್ರತಿಭೆಗೆ ಉಪಾಧ್ಯಾಯ ವರ್ಗ ದಂಗುಬಡಿದಿತ್ತು. ಎರಡು ವರ್ಷಗಳ ಪಾಠ ಪ್ರವಚನಗಳನ್ನು ಒಂದೇ ವರ್ಷದಲ್ಲಿ ಓದಿ ೧೯೧೯ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲೂ , ೧೯೨೧ರಲ್ಲಿ ಇಂಗ್ಲಿಷ್ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು.
ನಸುಕಿನಲ್ಲಿ ಎದ್ದು ಸ್ನಾನ ಮಾಡಿ, ಧ್ಯಾನ, ಪೂಜೆ ಮಾಡುತ್ತಿದ್ದರು. ಚಿಕ್ಕ ವಯಸ್ಸಿ ನಲ್ಲೇ ಶಿಸ್ತು ಬದ್ಧ ಜೀವನ, ಗಂಭೀರ ನಡೆ ನುಡಿ, ಕರ್ತವ್ಯದಲ್ಲಿನ ತೀವ್ರ ಆಸಕ್ತಿ, ನಿರ್ವಹಣಾ ಸಾಮರ್ಥ್ಯ ಹಿರಿಯರ ಗಮನ ಸೆಳೆಯಲು ಕಾರಣವಾಯಿತು.

ಶಿಕ್ಷಣ
ನಾಗವಲ್ಲಿಯಲ್ಲಿ ರೂರಲ್ ಎ.ವಿ.ಸ್ಕೂಲ್ (ಗ್ರಾಮಾಂತರ ಆಂಗ್ಲೋ ವರ್ನಾಕ್ಯುಲರ್ ಸ್ಕೂಲ್)ನಲ್ಲಿ ಯಶಸ್ವಿಯಾಗಿ ವಿದ್ಯಾಭ್ಯಾಸ ಮುಗಿಸಿದ ಶಿವಣ್ಣನವರು ಅಣ್ಣ ಲಿಂಗಪ್ಪನವರೊಂದಿಗೆ ೧೯೨೨ ರಲ್ಲಿ ತುಮಕೂರಿಗೆ ಬಂದರು.
ಸರಕಾರಿ ಹೈಸ್ಕೂಲಿಗೆ ಸೇರಿದರು. ತುಮಕೂರಿನಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ಸ್ವತಃ ಅಡುಗೆ ಮಾಡಿಕೊಂಡು ಊಟ ಮಾಡುತ್ತ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರಿಸಿದರು. ಹೈಸ್ಕೂಲಿನಲ್ಲಿ ಕೆಂಬಳಲಿನಿಂದ ಬಂದ ಕಾಳಪ್ಪನವರ (ಕನಕ ದೇಗುಲ ಮಠದ ಮಹಾಲಿಂಗ ಸ್ವಾಮಿಗಳು) ಪರಿಚಯವಾಯಿತು. ಸ್ನೇಹವಾಗಿ ತಿರುವು ಪಡೆಯಿತು. ಏಕದೇಹ ನ್ಯಾಯದ ನಿಕಟ ಮಿತ್ರರಾದರು.
ಸಿದ್ಧಗಂಗೆಯ ಕೀರ್ತಿಯನ್ನು, ಉದ್ದಾನ ಶಿವಯೋಗಿಗಳ ಮಹಿಮೆಯನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದ ಶಿವಣ್ಣನವರು ಬಿಡುವು ಸಿಕ್ಕಾಗಲೆಲ್ಲ ಸಿದ್ಧಗಂಗಾ ಕ್ಷೇತ್ರಕ್ಕೆ ಕಾಳಪ್ಪನವರೊಡನೆ ಭೇಟಿ ನೀಡುತ್ತಿದ್ದರು. ಆಗಲೇ ಇವರು ಉದ್ದಾನ ಶಿವಯೋಗಿಗಳ ಅತುಳ ಶಿವಯೋಗ ಸಂಪತ್ತಿಗೆ ಮಾರುಹೋದರು.
ಶಿವಣ್ಣನವರು ಸಿದ್ಧಗಂಗೆಯ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿದ್ದರು. ಬೆಟ್ಟವನ್ನೇರಿ ಸಿದ್ಧಲಿಂಗೇಶ್ವರ ಮೂರ್ತಿಯೆದುರು ಜಲತೀರ್ಥವಿರುವ ಅಮ್ಮನವರ ಗವಿಯಲ್ಲಿ ಕುಳಿತು ಗಂಟೆಗಟ್ಟಲೆ ಮೈಮರೆಯುತ್ತಿದ್ದರು. ಬೆಟ್ಟವನ್ನೇರಿ ಬೂದು ಬಣ್ಣದಲ್ಲಿ ವಿರಾಜಿಸುವ ಶಿವಗಂಗಾ ಬೆಟ್ಟ ನೋಡಿ ಕುಣಿದಾಡುತ್ತಿದ್ದರು. ಸಿದ್ಧಗಂಗಾ ಬೆಟ್ಟದ ಮೂಲೆ ಮೂಲೆಗಳ ಪರಿಚಯ ಮಾಡಿಕೊಂಡರು. ದಿನಕಳೆದಂತೆ ಸಿದ್ಧಗಂಗೆಯ ಮೇಲಿನ ಮಮತೆ ಅಕವಾಗತೊಡಗಿತು.

ಗುರು ತೆಕ್ಕೆಗೆ
ಶಿವಣ್ಣನವರ ತೇಜೋ ವಿಶೇಷ, ಗುರುಲಿಂಗಜಂಗಮ ಭಕ್ತಿ, ತಲ್ಲೀನತೆಗೆ ಆಕರ್ಷಿತರಾದ ಆ ಮಠದ ಉತ್ತರಾಕಾರಿಗಳೆಂದು ಗೊತ್ತಾಗಿದ್ದ ಮರುಳಾರಾಧ್ಯರು ಇವರಲ್ಲಿ ಯಾವುದೋ ವಿಶೇಷ ಶಕ್ತಿಯನ್ನು ಕಾಣತೊಡಗಿದರು. ಇವರಲ್ಲಿರುವ ಮಹತ್ತರ ತೇಜಸ್ಸಿಗೆ ಮಾರು ಹೋಗಿದ್ದರು.
ಪ್ಲೇಗಿನ ಭಯದಿಂದ ಕೊಠಡಿಯಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡುವುದು ಅನನುಕೂಲವಾಗಿತ್ತು. ಆದ್ದರಿಂದ ಉದ್ದಾನ ಶಿವಯೋಗಿಗಳನ್ನು ಕಂಡು ಆಶ್ರಯ ಪಡೆದು ಶಿಕ್ಷಣ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು. ಆದರೆ ಉದ್ದಾನ ಶಿವಯೋಗಿಗಳು `ಸಾಧ್ಯವಾಗುವುದಿಲ್ಲ' ಎಂದು ಬಿಟ್ಟರು. ಶಿವಣ್ಣನವರ ಆಸೆಗೆ ತಣ್ಣೀರೆರಚಿದಂತಾಯಿತು. ಸೆಟ್ಟಿಹಳ್ಳಿಯಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದು ಅಡುಗೆ ಮಾಡಿಕೊಂಡು ಶಿಕ್ಷಣ ಮುಂದುವರಿಸಿದರು.
ಕೊನೆಗೆ ನಾಲ್ಕು ತಿಂಗಳ ಅವಗೆ ಮಠದ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಪಡೆಯಲು ಅಪ್ಪಣೆ ನೀಡಿದರು. ಆಶ್ರಯ ಪಡೆದ ಶಿವಣ್ಣನವರು ೧೯೨೭ರ ಮಾರ್ಚ್, ಏಪ್ರಿಲ್‌ನಲ್ಲಿ ಮೆಟ್ರಿಕ್ಯುಲೇಶನ್ ನಂತರದ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಈ ನಾಲ್ಕು ತಿಂಗಳ ಅವಯಲ್ಲಿ ಶ್ರೀ ಕ್ಷೇತ್ರದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಮತ್ತು ಮಠದ ಉತ್ತರಾಕಾರಿ ಎಂದು ನೇಮಕಗೊಂಡಿದ್ದ ಮರುಳಾರಾಧ್ಯರ ನಡುವಿನ ಸ್ನೇಹ ಗಾಢವಾಯಿತು. ಅಂತೆಯೇ ಕಾಳಪ್ಪನವರ ಸ್ನೇಹವೂ.
ಗಂಭೀರ ಸ್ವಭಾವದ, ಸತತಾಭ್ಯಾಸದ, ಕ್ರಿಯಾ ಪ್ರಾಬಲ್ಯ ಶಕ್ತಿಯ ಶುದ್ಧ ಶೀಲಾದಿ ಗುಣ ವಿಶೇಷದ ಇವರ ಪ್ರಭಾವ ಮುದ್ರೆ ಎಲ್ಲರನ್ನೂ ಆಕರ್ಷಿಸಿತು. ಉದ್ದಾನ ಶಿವಯೋಗಿಗಳಿಗೆ ಶಿವಣ್ಣನವರ ಪರಿಚಯವಾಗತೊಡಗಿತು.
ಅವರ ಕರುಣಾಮೃತಧಾರಾ ಪಾತ್ರ ಆರಂಭವಾಯಿತು. ಶಿವಣ್ಣನವರ ಹೆಸರು ಮಠದ ಪರಿಸರದಲ್ಲಿ ಪ್ರತಿಧ್ವನಿಸತೊಡಗಿತು. ವೀರಾಪುರದ ಶಿವಣ್ಣ ಉತ್ತಮ ವಿದ್ಯಾರ್ಥಿ, ತೇಜಶ್ಯಾಲಿ, ಸಂಸ್ಕೃತಿ ಸಂಪನ್ನ, ಸಂಯಮಿ, ಸತ್ಯಶೀಲ, ಸದಾಚಾರಿ, ಲಿಂಗಪೂಜಾನಿಷ್ಠ, ಅತಿಸ್ನೇಹಿ, ಕರ್ತವ್ಯ ಕುಶಲ ಇತ್ಯಾದಿಯಾಗಿ ಜನರ ಪ್ರಶಂಸೆಗೆ ಪಾತ್ರರಾದರು.

ಬೆಂಗಳೂರಿಗೆ ಪ್ರಯಾಣ
ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಿವಣ್ಣ ಬೆಂಗಳೂರಿನ ತೋಟದಪ್ಪನವರ ವಿದ್ಯಾರ್ಥಿನಿಲಯಕ್ಕೆ ಸೇರಿಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ೧೯೨೭ನೇ ಇಸವಿಯಿಂದ ವಿದ್ಯಾಭ್ಯಾಸ ಮುಂದುವರಿಸಿದರು.
ಬೆಂಗಳೂರಿನಲ್ಲಿ ವಿದ್ಯಾರ್ಥಿಜೀವನ ಕಳೆಯುತ್ತಿದ್ದರೂ ರಜಾ ದಿನಗಳನ್ನು ಸಿದ್ಧಗಂಗಾ ಕ್ಷೇತ್ರದಲ್ಲಿ ಕಳೆಯುವುದೇ ಅಕವಾಯಿತು. ಸದಾ ಮರುಳಾರಾಧ್ಯರ ಸ್ನೇಹದಲ್ಲಿಯೇ ಇರುತ್ತಿದ್ದ ಇವರು ಆಗಾಗ ಉದ್ದಾನ ಶಿವಯೋಗಿಗಳ ದೃಷ್ಟಿಗೆ ಬಿದ್ದು ಪರೀಕ್ಷೆಗೊಳಗಾಗುತ್ತಿದ್ದರು.
ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಗಣಿತಗಳನ್ನು ಐಚ್ಛಿಕ ವಿಷಯಗಳನ್ನಾಗಿ ಸ್ವೀಕರಿಸಿ, ಎರಡು ವರ್ಷ ಮುಗಿಸಿ ಮೂರನೇ ವರ್ಷದಲ್ಲಿ ಮುಕ್ಕಾಲು ಭಾಗ ಕಳೆದಿತ್ತು. ಅಂತಿಮ ಪರೀಕ್ಷೆಗೆ ಕಾದು ಕುಳಿತಿದ್ದರು.
೧೯೩೦ ಜನವರಿ ೧೬ ರಂದು ಬರಸಿಡಿಲಿನಂತೆ ದಾರುಣ ವಾರ್ತೆಯೊಂದು ಬಂದು ಬಡಿಯಿತು. ಸಿದ್ಧಗಂಗಾ ಕ್ಷೇತ್ರದ ಉತ್ತರಾಕಾರಿ ಮರುಳಾರಾಧ್ಯರು ಲಿಂಗೈಕ್ಯರಾಗಿದ್ದರು. ತತ್‌ಕ್ಷಣ ಶ್ರೀ ಕೇತ್ರಕ್ಕೆ ಧಾವಿಸಿ ಬಂದರು ಅನ್ನುವುದಕ್ಕಿಂತ ದೈವ ಕರೆದುಕೊಂಡು ಬಂದಿತು. ತಂದೆ-ತಾಯಿಯವರನ್ನು ಕೇಳದೆ ಗುರುಗಳ ಅಪ್ಪಣೆಯಿಂದ ಮಠಾಪತಿಯಾಗಲು ಒಪ್ಪಿಕೊಂಡರು.
ಸನ್ಯಾಸ ಸ್ವೀಕಾರ ಮಾಡಿದ ಮೇಲೆ ಆಚರಣೆ, ಅನುಷ್ಠಾನಗಳನ್ನು ದೋಷರಹಿತವಾಗಿ, ಕಟ್ಟುನಿಟ್ಟಾಗಿ ಪಾಲಿಸಬೇಕಾಯಿತು.

ಶಿವಣ್ಣ ಸ್ವಾಮೀಜಿಯಾಗಿದ್ದು ಹೀಗೆ
ಮರುಳಾರಾಧ್ಯರ ಮಹಾಯೋಗದ ನಂತರ ಉದ್ದಾನ ಶಿವಯೋಗಿಗಳು ತಮ್ಮ ಮುಂದಿನ ಮಾರ್ಗಕ್ಕಾಗಿ ಬೆಟ್ಟವನ್ನೇರಿ ಅಮ್ಮನವರ ಗವಿಯಲ್ಲಿ ಭಾವ ಸಮಾಯಲ್ಲಿ ಮುಳುಗಿದರು. ಆಗ ಅವರು ತಮ್ಮ ಅಂತರ್ಮುಖದ ಕನ್ನಡಿಯಲ್ಲಿ ಒಬ್ಬ ತೇಜೋ ವಿಶೇಷ, ಭಸ್ಮೋದ್ಧೂಳಿತ ಶರೀರದ, ರುದ್ರಾಕ್ಷಿ ಮಾಲಾಲಂಕೃತ ಬಾಲ ಶಿವಯೋಗಿಯನ್ನು ನೋಡಿದರು. ಆ ಬಾಲ ಯೋಗಿಯ ಮುಖ ಪರಿಚಿತವಾದದ್ದು ಎನಿಸಿತು. ಸಿದ್ಧಲಿಂಗೇಶ್ವರನ ಕಾರುಣ್ಯಕ್ಕೆ ತಲೆ ಬಾಗಿದರು.
ಸಹಸ್ರಾರು ಜನರ ಮುಂದೆ ಮರುಳಾರಾಧ್ಯರ ಸಮಾ ಪೂಜಾ ಕಾರ್ಯ ಮುಗಿಯುತ್ತಿದ್ದಂತೆ ಉದ್ದಾನ ಶಿವಯೋಗಿಗಳು ಅಲ್ಲಿಗೆ ಒಮ್ಮಿಂದೊಮ್ಮೆಲೇ ಬಂದರು. ಸುತ್ತಲೂ ಜನಜಂಗುಳಿ ಉಂಟಾಯಿತು. ಶಿವಣ್ಣನವರೂ ಸ್ವಾಮಿಗಳ ಎದುರೇ ನಿಂತಿದ್ದರು. `ಶಿವಣ್ಣನವರೇ ನೀವು ಈ ಮಠದ ಉತ್ತರಾಕಾರವನ್ನು ವಹಿಸಿಕೊಂಡು ಸಿದ್ಧಲಿಂಗೇಶ್ವರರ ಪ್ರತಿನಿಗಳಾಗಿ ಇತೋಪ್ಯತಿಶಯವಾಗಿ ಈ ದಾಸೋಹ ಕ್ಷೇತ್ರದ ಗುರುತರ ಹೊಣೆಗಾರಿಕೆಯನ್ನು ವಿಶೇಷ ಶಕ್ತಿ ಸಾಮರ್ಥ್ಯದಿಂದ ನಡೆಸಿಕೊಂಡು ಹೋಗಬೇಕೆಂಬುದು ಸಮಸ್ತ ಭಕ್ತರ ಅಭಿಲಾಷೆ, ಸಿದ್ಧಲಿಂಗೇಶ್ವರರ ಆe, ನಮ್ಮ ಇಚ್ಛೆ. ಯಾವುದನ್ನೂ ಯೋಚಿಸದೇ ನಮಸ್ಕಾರ ಹಾಕಿಬಿಡಿ' ಎಂದು ಶಿವಣ್ಣನವರ ಶಿರದ ಮೇಲೆ ಕೈ ಇಟ್ಟು ಹೇಳಿಬಿಟ್ಟರು.
ಉದ್ದಾನ ಶಿವಯೋಗಿಗಳು ಶಿರದ ಮೇಲೆ ಕೈ ಇಟ್ಟೊಡನೆ ಶಿವಣ್ಣನವರು ತಮ್ಮನ್ನು ತಾವು ಮರೆತರು. ನಡುಗಿ ದೃಢಗೊಂಡರು. ಉದ್ದಾನೇಶ್ವರರ ಪದತಲದಲ್ಲಿ ತಮ್ಮನ್ನು ಅರ್ಪಿಸಿಕೊಂಡರು. ಅದ್ಭುತ ಶಕ್ತಿ ಸಂಚಾರವಾಯಿತು. ಒಪ್ಪಿಗೆ ಸೂಚಿಸಿದರು. ಅವರಿತ್ತ ವೀರಶೈವ ವಿರಕ್ತ ಪರಂಪರೆಯ ಕಾಶಾಯ ವಸ್ತ್ರ ಧರಿಸಿ `ಶಿವಕುಮಾರ ಸ್ವಾಮಿಗಳು'ಎಂಬ ನೂತನ ನಾಮಾಂಕಿತ ಪಡೆದರು.

ಸೇವೆಯೇ ಸುಯೋಗ
ತ್ರಿವಿಧ ದಾಸೋಹಿಯ ಸಿದ್ಧಗಂಗಾ ಕ್ಷೇತ್ರದಲ್ಲಿ ಸೇವೆಯೆಂಬುದು ಯಜ್ಞದಂತೆ ಸಾಗಿದೆ. ಸಾವಿರಾರು ಭಕ್ತರು ನೂರಾರು ವಿಧದಲ್ಲಿ ತಮ್ಮ ಸೇವೆಯನ್ನು ತೆರೆಮರೆಯಲ್ಲೇ ಸಲ್ಲಿಸುತ್ತಾರೆ.
ತೋರಿಕೆಗಿಂತ ಮರೆಯಲ್ಲಿ ಸೇವೆ ಮಾಡುವವರೇ ಹೆಚ್ಚು ಮಂದಿ. ಈ ಮಹಾಮನೆಗೆ ಗುರುವಂದನೆ ಕಾರ್ಯಕ್ರಮದಂದು ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇವರೆಲ್ಲ ಪ್ರಸಾದ ಸ್ವೀಕರಿಸಿಯೇ ಹೋಗಬೇಕು. ಇದು ಶ್ರೀಗಳ ಕಟ್ಟಪ್ಪಣೆ. ಸ್ವಲ್ಪವೂ ಲೋಪವಾಗದಂತೆ ಸರ್ವರಿಗೂ ದಾಸೋಹ ನಡೆಸುವುದು ಸಾಹಸವೇ ಸರಿ. ಇಲ್ಲಿಗೆ ಲಕ್ಷಾಂತರ ಊಟದ ಎಲೆ, ಅಕ್ಕಿ, ಬೇಳೆ, ಕಾಳು, ಎಣ್ಣೆ ಮತ್ತಿತರ ಸಾಮಗ್ರಿಗಳು ಲಾರಿಗಳಲ್ಲಿ ಸದಾ ಬಂದು ಬೀಳುತ್ತಲೇ ಇರುತ್ತದೆ.
ಈ ಹಿಂದೆ ಪಟ್ಟಾಕಾರದ ವಜ್ರ ಮಹೋತ್ಸವದ ಸಂದರ್ಭದಲ್ಲಿ ಚಳ್ಳಕೆರೆಯಿಂದ ಒಬ್ಬರು ಟ್ಯಾಂಕರ್‌ನಲ್ಲಿ ಎಣ್ಣೆ ಕಳಿಸಿದರಂತೆ, ತಮಿಳುನಾಡಿನವರೊಬ್ಬರು ಒಂದು ಲಾರಿ ತುಂಬ ಬಾಳೆ ಎಲೆ ಕಳುಹಿಸಿದರಂತೆ. ಆದರೆ ಅವರು ತಮ್ಮ ಹೆಸರೂ ಹೇಳಲಿಲ್ಲವಂತೆ. ಈ ಪರಿಯ ಸೇವೆ ಇಲ್ಲಿ ಸದಾ ನಡೆಯುತ್ತಲೇ ಇದೆ. ಮಠದಲ್ಲಿ ಯಾವುದೇ ಸಮಾರಂಭವಾದರೂ ಬಂಡೆಪಾಳ್ಯ, ಶ್ರೀನಗರ, ಕ್ಯಾತ್ಸಂದ್ರ ಸೇರಿದಂತೆ ಮಠದ ಸುತ್ತಮುತ್ತಲ ಬಡಾವಣೆಗಳ ಜನರು, ಶ್ರೀಮಠದ ಭಕ್ತರಾದ ನೂರಾರು ಗ್ರಾಮಗಳ ಜನರು ಪಾಳಿಯಲ್ಲಿ ತಂಡೋಪತಂಡವಾಗಿ ಬಂದು ಸೇವೆ ಮಾಡುತ್ತಾರೆ. ಮಹಿಳೆಯರು ರವೆ ಹುರಿಯುವುದು, ತರಕಾರಿ ಹೆಚ್ಚುವುದು, ಪುರುಷರು ಬೂಂದಿ ತಯಾರಿಸುವುದು, ಚಪ್ಪರ, ನೀರಿನ ವ್ಯವಸ್ಥೆ, ಉರುವಲು ಸಿದ್ಧತೆ ಹೀಗೆ... ಎಲ್ಲವನ್ನೂ ನೋಡಿಕೊಳ್ಳುತ್ತಾರೆ.

1 comment:

Dr Y C Kamala said...

shree vaani bahala chennagide.adu hechhu janarige talupabeku.