Sunday, November 30, 2008

ಧರ್ಮಪೀಠಗಳು ನವ ಸಮಾಜ ನಿರ್ಮಿಸಬೇಕು

(ನಾಡಿನ ಹಲವು ಪತ್ರಿಕೆಗಳು, ವಿದ್ವಾಂಸರು, ಸಾಹಿತಿಗಳು ಈವರೆಗೆ ಸ್ವಾಮೀಜಿಯವರನ್ನು ಸಾಕಷ್ಟು ಸಲ ಸಂದರ್ಶಿಸಿದ್ದಾರೆ. ಆ ಎಲ್ಲ ಸಂದರ್ಶನಗಳ ಸಾರ ಇಲ್ಲಿದೆ)
* ಸನ್ಯಾಸ ಧರ್ಮ ಒಪ್ಪಿಕೊಳ್ಳುವ ಸಂದರ್ಭದ ಮನಃಸ್ಥಿತಿ
- ಸನ್ಯಾಸ ಸ್ವೀಕಾರ ಮಾಡಿದ ಮೇಲೆ ಆಚರಣೆ- ಅನುಷ್ಠಾನಗಳನ್ನು ದೋಷರಹಿತವಾಗಿ, ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಆದರೂ ಗುರು ಆಜ್ಞೆ. ಶಿವಯೋಗಿಗಳ ಪ್ರೇರಣೆಯ ವಿನಃ ಬೇರಾವುದೂ ನಮ್ಮ ಮನದಲ್ಲಿರಲಿಲ್ಲ. ಆ ಕ್ಷಣದಲ್ಲಿ ಸಮರ್ಪಿಸಿಕೊಂಡೆವು.

* ಸನ್ಯಾಸಿ ಆಗದೇ ಹೋಗಿದ್ದರೆ, ಬೇರೆ ಬಯಕೆ
- ಅದನ್ನ ಯೋಚನೆ ಮಾಡಿರಲಿಲ್ಲ.

* ನಿರಂತರ ದಾಸೋಹಕ್ಕೆ ಪ್ರೇರಣೆ, ಆರ್ಥಿಕ ಸವಾಲು
- ನಮ್ಮ ಗುರುಗಳು ಮಾರ್ಗದರ್ಶನ ಮಾಡಿದ್ರು. ಅವ್ರು ಹೆಚ್ಚು ಓದಿದವರಲ್ಲ. ಆದರೆ ತಪೋನಿಷ್ಠರಾಗಿದ್ದರು. ಹಣಕಾಸಿನ ತೊಂದರೆ ಇದ್ದೇ ಇತ್ತು. ೧೯೧೭ರಲ್ಲಿ ಅವರು ಸಂಸ್ಕೃತ ಪಾಠಶಾಲೆ ಆರಂಭಿಸಿದಾಗ ಸರಕಾರದಲ್ಲಿ ಕೂಡ ಜಾತ್ಯತೀತ ವ್ಯವಸ್ಥೆ ಇರಲಿಲ್ಲ. ಜಾತಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡುತ್ತಿದ್ದ ಕಾಲ. ಆದರೆ ನಮ್ಮ ಗುರುಗಳು ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿಕೊಟ್ರು. ಎಲ್ಲ ಸಮಾಜದವರಿಗೂ ಅವಕಾಶ ಕಲ್ಪಿಸಿಕೊಟ್ರು. ಆಗ ಸರಕಾರ ಏನೂ ಗ್ಯ್ರಾಂಟು ಕೊಡ್ತಿರಲಿಲ್ಲ. ಆಮೇಲೆ ಸಂಸ್ಕೃತ ಪಾಠಶಾಲೆಗೆ ಸರಕಾರ ಸಣ್ಣ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಿತು. ೬ ರಿಂದ ೧೮ ವರ್ಷದ ಒಳಗಿನ ಮಕ್ಕಳಿಗೆ ಮತ್ತು ತಂದೆ-ತಾಯಿಗಳು ಇಲ್ಲದಂಥ ಮಕ್ಕಳಿಗೆ ಸರಕಾರ ಆರ್ಫನೇಜ್ ಗ್ಯ್ರಾಂಟ್ ಕೊಡ್ತಿದೆ. ಆ ಗ್ಯ್ರಾಂಟ್ ಕೊಟ್ಟಿದ್ದೂ ಬಹಳ ಕಾಲದ ಮೇಲೆ. ಸಂಸ್ಥೆ ಆರಂಭವಾಗಿ ೨೦ ವರ್ಷಗಳ ಅನಂತರ, ಅದೂ ತುಂಬಾ ಕಡಿಮೇನೇ ಇತ್ತು. ೧೯೩೦ರಲ್ಲಿ ನಮಗೆ ಆಶ್ರಮವಾಯಿತು. ಅನಂತರದಲ್ಲಿ ಸರಕಾರ ಗಮನಿಸುತ್ತ ಬಂತು. ಈ ಸಂಸ್ಥೆ ಪ್ರಾರಂಭವಾದದ್ದು ಝೀರೊ ಪಾಯಿಂಟ್‌ನಿಂದ. ಹಣ ಇರ್‍ಲಿಲ್ಲ. ಯಾವ ಸಹಾಯವೂ ಇರ್‍ಲಿಲ್ಲ. ಜನ ಸಹಾಯ ಮಾಡ್ತಾ ಬಂದ್ರು.

* ಜನಗಳ ನೆರವು
- ಇಲ್ಲ. ಜನರನ್ನ ನಾನು ಕೇಳೋಕ್ಕೆ ಹೋಗಿಲ್ಲ. ಆದ್ರೆ ಅವರೇ ಸ್ವತಃ ಸಂಸ್ಥೆಯ ಸೇವೆ ನೋಡುತ್ತ ಸಹಾಯ ಮಾಡುತ್ತಾ ಬಂದರು. ರೈತಾಪಿ ಜನ ದವಸ, ದಾನ್ಯ ಕೊಡ್ತಾ ಬಂದ್ರು. ಆಗ ಸರಕಾರವೂ ಮುಂದೆ ಬಂತು. ಎಲ್ಲ ಜಾತಿಯ ಜನರೂ ಸ್ಪಂದಿಸಿ ಸಹಾಯ ಮಾಡಿದ್ರು.

*ಪೀಠಾರೋಹಣ ಮಾಡಿದ ಸಂದರ್ಭ, ಘಟನೆ
- ಮಠದೊಂದಿಗೆ ನನಗೆ ಅಷ್ಟೇನೂ ಪೂರ್ವ ಪರಿಚಯ ಇರಲಿಲ್ಲ. ನನ್ನ ವ್ಯಾಸಂಗ ತುಮಕೂರಿನಲ್ಲಾಯ್ತು. ಆಗ ಮೂರು ವರ್ಷ. ನಾನೇ ಸ್ವಂತ ಅಡುಗೆ ಮಾಡ್ಕೊಂಡು ಊಟ ಮಾಡ್ತಾ ವ್ಯಾಸಂಗ ಮಾಡ್ತಿದ್ದೆ(ನಗು). ೧೯೨೭ರಲ್ಲಿ ತುಮಕೂರಿಗೆ ಪ್ಲೇಗ್ ಬಂದಾಗ ಪಕ್ಕದ ಶೆಟ್ಟಿಹಳ್ಳಿಗೆ ಹೋದೆ. ಅಲ್ಲಿಗೂ ಪ್ಲೇಗ್ ಬಂತು. ಆನಂತರ ಬಂದ ಸ್ವಾಮಿಗಳನ್ನು ಕಂಡೆ. ೫೦ ಜನ ಮಾತ್ರ ವಿದ್ಯಾರ್ಥಿಗಳಿದ್ದರು. ಆಗ ಕೊಂಚ ಕಾಲ ಮಠದಲ್ಲಿರಲು ನನಗೂ ಅವಕಾಶ ಕಲ್ಪಿಸಿದರು. ಆಮೇಲೆ ನಾನು ಬಿ.ಎ. ಓದಲು ಬೆಂಗಳೂರಿಗೆ ಹೋದೆ. ಆಗ ಮಠದಲ್ಲಿದ್ದ ಉತ್ತರಾಕಾರಿಗಳು ಆಕಸ್ಮಿಕವಾಗಿ ಲಿಂಗೈಕುರಾದರು. ಅವರ ಅಂತ್ಯ ಸಂಸ್ಕಾರಕ್ಕಾಗಿ ಮಠಕ್ಕೆ ಬಂದಾಗ ನನಗೆ ಆಶ್ರಮವಾಯ್ತು. ತಂದೆ-ತಾಯಿಗಳನ್ನೂ ಕೇಳದೆ, ಗುರುಗಳ ಅಪ್ಪಣೆಯನ್ನು ತತ್‌ಕ್ಷಣ ಒಪ್ಪಿಕೊಂಡೆ. ಆಶ್ರಮವಾದ ಅನಂತರವೇ ಡಿಗ್ರಿ ಪರೀಕ್ಷೆ ಬರೆದೆ.

* ಅನನ್ಯ ಬದುಕಿನ ಮೇಲೆ ಪ್ರಭಾವ ಬೀರಿದ ಹಿರಿಯ ದಾರ್ಶನಿಕರು
- ನಮ್ಮ ಗುರುಗಳ ಮಾರ್ಗದರ್ಶನವೇ ನಮ್ಮ ಮೇಲೆ ಪ್ರಭಾವ ಬೀರಿತು. ಅನಂತರ ಅಭ್ಯಾಸ ಮಾಡುತ್ತ ಬಂದಂತೆ ಬಸವಣ್ಣನವರ ವಚನಗಳ ಅಧ್ಯಯನ ಪ್ರೇರಕ ಶಕ್ತಿಯಾಯಿತು. ಅದು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಮ್ಮ ಮೇಲೆ ಪ್ರಭಾವ ಬೀರಿತು. ಜತೆಗೆ ಒಳ್ಳೆಯವರ ಸಹವಾಸ, ಮುಖಂಡರುಗಳ ಒಡನಾಟ, ನಮಗೆ ಕಲಿಸಿದ ಉತ್ತಮ ಬೋಧಕರ ಪ್ರಭಾವ (ಕನ್ನಡಕ್ಕೆ ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಗಳು; ಇಂಗ್ಲಿಷ್‌ಗೆ ನಂಜುಂಡಯ್ಯ, ಪ್ರೊ.ಸೆಲ್. ಕೆಮಿಸ್ಟ್ರಿಗೆ ಸಂಜೀವರಾವ್, ಪುಟ್ಟಸ್ವಾಮಿ ಅಯ್ಯಂಗಾರ್ ಮುಂತಾದ ಉಪಾಧ್ಯಾಯರಿದ್ದರು)ವಿತ್ತು. ವಾತಾವರಣ ಚೆನ್ನಾಗಿದ್ದ ಕಾರಣ ಯಾವುದೇ ಕೆಲಸ ಹಿಡಿದರೂ ಮುಂದುವರಿಸಲು ಪ್ರಬಲ ಇಚ್ಛಾಶಕ್ತಿಯಿತ್ತು. ಆಗ ಪತ್ರಿಕೆಗಳನ್ನು ಓದುತ್ತಿದ್ದೆವು. ಬಹಳ ವಿಷಯಗಳು ಬರ್‍ತಿದ್ದವು.
ಆಗ ಮಹಾರಾಜರ ಕಾಲ. ಅವರ ಸರಕಾರವಿತ್ತು. ಸ್ವಾತಂತ್ರ್ಯ ಬರೋ ೧೫ ವರ್ಷ ಮುಂಚೆ ನನಗೆ ಆಶ್ರಮವಾಗಿತ್ತು. ಆಗ ರಾಜಕೀಯ ವ್ಯಾಪ್ತಿಯಿತ್ತು. ಮಹಾರಾಜರ ಕಾಲ ಹೋದ ಮೇಲೆ ಅವರೂ ಇಲ್ಲಿಗೆ ಬರ್‍ತಿದ್ರು. ಸ್ವಾತಂತ್ರ್ಯ ಹೋರಾಟಗಾರರೂ ಬರ್‍ತಿದ್ರು. ನೆಹರೂ ತುಮಕೂರಿಗೆ ಬಂದಾಗ ಯಾವ ಭದ್ರತೆಯ ವ್ಯವಸ್ಥೆಯೂ ಇಲ್ಲದೆ ಲೀಲಾಜಾಲವಾಗಿ ಮಕ್ಕಳೊಂದಿಗೆ ಬೆರೆತರು.

* ಅಂದಿನ ಮತ್ತು ಇಂದಿನ ರಾಜಕಾರಣಿಗಳ ನಡುವಿನ ವ್ಯತ್ಯಾಸ
- ವ್ಯತ್ಯಾಸಗಳು ಬಹಳ ಕಾಣುತ್ತಿವೆ. ಆಗಿನವರಲ್ಲಿ ರಾಷ್ಟ್ರ ಭಕ್ತಿ ಇತ್ತು. ರಾಷ್ಟ್ರ ಕಟ್ಟುವ ಮಹತ್ತರವಾದ ಆಕಾಂಕ್ಷೆಯಿತ್ತು. ಸ್ವಾರ್ಥವಿರಲಿಲ್ಲ. ರಾಷ್ಟ್ರ...ರಾಷ್ಟ್ರ..ರಾಷ್ಟ್ರ ಎಂದು ತುರಂಗವಾಸ ಅನುಭವಿಸಿ ಮಹಾತ್ಯಾಗವನ್ನೇ ಮಾಡಿದರು. ಸ್ವಾತಂತ್ರ್ಯ ತರುವ ಉದಾತ್ತವಾದ ಮಹೋತ್ತರ ಧ್ಯೇಯವಿತ್ತು. ನಾವು, ನಮ್ಮ ಕುಟುಂಬ ಅನ್ನೋ ಪ್ರಶ್ನೆಯೇ ಅವರಲ್ಲಿರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಸ್ವಾರ್ಥ ಪ್ರವೇಶಿಸಿತು. ಈಗಿನ ರಾಜಕಾರಣಿಗಳ ಬಗ್ಗೆ ಹೇಳೋದಕ್ಕೆ ಸಾಧ್ಯವಾಗುವಂತಿಲ್ಲ (ನಗು). ಆದರ್ಶವಾಗಿರುವವರು ಸಿಗೋದೇ ಕಷ್ಟವಾಗಿದೆ. ಸುಭಾಷ್‌ಚಂದ್ರ ಬೋಸರು ಆಗ ಏನೆಲ್ಲ ಕೆಲ್ಸ ಮಾಡಿದ್ರು... ಮಕ್ಳನ್ನು ಕಂಡ್ರೆ ಓಡ್ಕೊಂಡೇ ಹೋಗ್ತಾ ಇದ್ರು. ಅವ್ರ ಜತೆ ಮಾತಾಡ್ಕೊಂಡು ನಿಂತು ಬಿಡ್ತಿದ್ರು.

* ಧರ್ಮ ಮತ್ತು ರಾಜಕಾರಣ; ಅವುಗಳ ನಡುವಿನ ಸಂಬಂಧ
- ಹೌದು. ದೊಡ್ಡ ಸಮಸ್ಯೆಯಾಗಿದೆ ಅದು. ಮೊದಲು ಧರ್ಮಗುರುಗಳ ವರ್ಚಸ್ಸು, ಪ್ರಭಾವ ರಾಜಮಹಾರಾಜರ ಮೇಲಿತ್ತು. ಅಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ. ಅವರು ತಿದ್ದತಕ್ಕಂಥ ಪ್ರಭಾವ ಬೆಳೆಸಿಕೊಂಡಿದ್ರು. ಗುರುವಿನ ಅಪ್ಪಣೆ ಮೀರುವಂಥ ಶಕ್ತಿ ಅವರಿಗೆ ಇರ್‍ಲಿಲ್ಲ. ಉದಾತ್ತ ಭಾವನೆಯಿತ್ತು. ಆತ್ಮಶಕ್ತಿ ಸಂಪನ್ನರಾಗಿದ್ದರು. ಬದಲಾವಣೆ ಜಾಸ್ತಿಯಾಗುತ್ತ ಬಂದಂತೆ. ಇತ್ತೀಚೆಗೆ ಮಠಾಪತಿಗಳು, ಧರ್ಮಗುರುಗಳು ತಪೋಶಕ್ತಿ, ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಪ್ರಗತಿ ಕಾಣುತ್ತಿಲ್ಲ. ಕೆಲವು ಸಮಾಜದವರು ಗುರುಗಳನ್ನು, ನೇಮಕ ಮಾಡಿಕೊಂಡು ಸ್ವಾರ್ಥದ ಮೂಲಕ ಸಮಾಜವನ್ನು ಮುಂದುವರಿಸಬೇಕೆನ್ನುವ ದೃಷ್ಟಿ ಕಾಣ್ತಾ ಇದೆ. ವಾಸ್ತವಿಕವಾಗಿ ಧರ್ಮಪೀಠಗಳು ರಾಜಕೀಯ ಜೀವನದಲ್ಲಿ, ಸಾಮಾಜಿಕ ಜೀವನದಲ್ಲಿ ತಪ್ಪನ್ನು ತಿದ್ದತಕ್ಕ ಪರಿಸ್ಥಿತಿ ಬರಬೇಕು. ಇವತ್ತು ಆ ಶಕ್ತಿಯೂ ಇಲ್ಲ. ಹಾಗಾಗಿ ಅವರೂ ಕೂಡ ಮಾತುಗಳನ್ನು ಕೇಳುತ್ತಿಲ್ಲ. ಗೌರವ ಕೊಡತಕ್ಕ ಒಂದು ಕಾಲವಿತ್ತು. ಧರ್ಮಪೀಠಗಳು ಕೂಡ ತಮ್ಮ ಶಕ್ತಿಯನ್ನು ಕಳೆದುಕೊಳ್ಳುವ ಕಾಲ ಬರುತ್ತಿದೆ. ಜನರೂ ಕೂಡ ಗಮನ ಕೊಡುವುದು ಕಡಿಮೆಯಾಗಿ ಸ್ವಾರ್ಥವೇ ಜಾಸ್ತಿಯಾಗಿದೆ.

* ಅಧ್ಯಾತ್ಮ, ಸಮಾಜ ಸೇವೆ, ಮಾರ್ಗದರ್ಶನ ಮಠಾಪತಿಗಳ ಕರ್ತವ್ಯ...
- ಇವತ್ತಿನ ವಾತಾವರಣದಲ್ಲಿ ಕೆಲವು ಮಠಗಳು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಕೆಲಸ ಮಾಡುತ್ತಿವೆ. ಆದರೂ ರಾಜಕೀಯ ವ್ಯಕ್ತಿಗಳ ಮೇಲೆ ಪ್ರಭಾವ ಬಿರಲು ಸಾಧ್ಯವಾಗುತ್ತಿಲ್ಲ. ಇನ್ನೂ, ತಿಳಿಮಾತನ್ನೇನೂ ಹೇಳಬಹುದು. ಆದರೆ ಅದನ್ನು ಪರಿಪಾಲಿಸುವ ಸನ್ನಿವೇಶವಿಲ್ಲ. ನಾವು ಹೇಳಿದರೆ ವಾತಾವರಣ ಕಲುಷಿತವಾಗಬಹುದು. ಜನರು ಕೆಲಮಟ್ಟಿಗೆ ಪರಿಪಾಲನೆ ಮಾಡುವ ಸಾಧ್ಯತೆ ಇದೆ. ಹೇಳುವಂಥದ್ದನ್ನು ಹೇಳುತ್ತಿದ್ದೇವೆ, ಪ್ರಸ್ತಾವಿಸುತ್ತಿದ್ದೇವೆ. ಅದು ಪ್ರಭಾವ ಬೀರುತ್ತಿಲ್ಲ. ಒತ್ತಾಯ ಮಾಡಲೂ ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ನೋವಾಗುತ್ತದೆ. ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ, ಸಂಸ್ಥೆಗಳ ಹಿತದೃಷ್ಟಿಯಿಂದ ಸತ್ಯಾಂಶಗಳನ್ನು ಹೇಳಹೋದಾಗ ಅದು ಬೇರೆಯೇ ರೂಪ ಪಡೆಯುತ್ತದೆ. ವ್ಯಾವಹಾರಿಕ ನೆಲೆಯಲ್ಲಿ ಕೂಡ ನಮ್ಮ ಮಾತುಗಳನ್ನು ಒಪ್ಪದಿರುವ ಸನ್ನಿವೇಶ ಉಂಟಾಗುತ್ತದೆ.

* ಆಧುನಿಕ ಶಿಕ್ಷಣ, ವ್ಯಾಪಾರೀಕರಣ
- ಶಿಕ್ಷಣ ಕ್ರಮ, ರೀತಿ- ನೀತಿ ಬದಲಾವಣೆಯಾಗಿದೆ. ಎಲ್ಲ ದೃಷ್ಟಿಯಿಂದ ಹಣ ಸಂಪಾದಿಸುವ ದೃಷ್ಟಿ ಬಂದಿದೆ. ಕಲ್ಚರಲ್ ಅಸ್ಪೆಕ್ಟ್ ಬಹಳ ಕಡಿಮೆಯಾಗುತ್ತಿದೆ. ನಿಜವಾದ ವಿದ್ಯೆ ಅನ್ನೋದು ಶಬ್ದ ಬಂದಾಗ ಕೂಡ ಅದನ್ನು ಪಡೆದುಕೊಳ್ಳೋ ಆಸಕ್ತಿ ಕಡಿಮೆ. ವಿದ್ಯಾವಂತರ ಲಕ್ಷಣ ಜ್ಞಾನಾರ್ಜನೆ. ಅದೇ ಕಡಿಮೆಯಾಗಿದೆ. ರ್‍ಯಾಂಕ್ ತಗೋಬೇಕು. ಆಸ್ತಿ ಗಳಿಸಬೇಕು ಅನ್ನೋದೇ ಆಸಕ್ತಿ. ಮೊದಲು ಯಾವಾಗ ಶಿಕ್ಷಣ ಕೊಡುವ ವ್ಯವಸ್ಥೆ ಇರಲಿಲ್ಲವೋ ಆಗ ವೀರಶೈವ ಮಠಗಳು ಮುಂದೆ ಬಂದು ಶಿಕ್ಷಣ ನೀಡುವ ಸೌಕರ್ಯ ಒದಗಿಸಿದವು. ನಮ್ಮ ಸಿದ್ದಾಂತದ ಪ್ರಕಾರ ಬಸವಣ್ಣನವರ ಮಹಾತತ್ವ ಅಂದರೆ ಸಮಾಜವನ್ನು ಸರಿಪಡಿಸುವುದು. ವ್ಯಷ್ಟಿ- ಸಮಷ್ಟಿ ಎರಡೂ ಜತೆಯಾಗಿ ಹೋಗುವ ಸನ್ನಿವೇಶ. ಇತ್ತೀಚೆಗೆ ಸರಕಾರ ನೀಡುವ ಆರ್ಥಿಕ ನೆರವಿನಲ್ಲಿ ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಆಗ ಕೊಮಚ ಮಟ್ಟಿಗೆ ದೇಣಿಗೆ ಪಡೆಯುವುದು ಅನಿವಾರ್‍ಯ. ಆದರೆ ಹಣ ಗಳಿಕೆಯೇ ದುರುದ್ದೇಶವಾಗಬಾರದು. ಸಂಸ್ಥೆಗೆ ಬೇಕಾದಷ್ಟು ಹಣ ಪಡೀಬೇಕು. ಸಂಪಾದನೆ ಮಾಡಬೇಕಾದ್ದು ಉಚಿತವಲ್ಲ.

* ಅನ್ನ ದಾಸೋಹ/ಅಕ್ಷರ ದಾಸೋಹ ತುಮಕೂರಿನಾಚೆ ದಾಟದ ಬಗ್ಗೆ
- ವಿಶೇಷವಾಗಿ ಅತ್ತ ಗಮನ ಕೊಟ್ಟಿಲ್ಲ. ವ್ಯಾವಹಾರಿಕವಾಗಿ, ಭಾವನಾತ್ಮಕವಾಗಿ ಎಷ್ಟು ಬೇಕೋ ಅಷ್ಟು ಇದೆ.

* ಶತಮಾನದ ಅವಿಸ್ಮರಣೀಯ ಘಟನೆ
- ಆ ಬಗ್ಗೆ ವಿಶೇಷವಾಗಿ ಗಮನಿಸಿಲ್ಲ.

*ಸಂತರಿಗೆ, ಮಠಗಳಿಗೆ ಸಂದೇಶ
ಧರ್ಮಪೀಠಗಳು ನವ ಸಮಾಜ ನಿರ್ಮಿಸಬೇಕು. ಸಂತರು ಸಮಾಜ ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು.


ಕೃಪೆ-ವಿವಿಧ ಪತ್ರಿಕೆಗಳು

No comments: