Sunday, November 30, 2008

ವಿರಶೈವ ಧರ್ಮ, ಹಿಂದು ಧರ್ಮದ ಶಾಖೆ

(ನಾಡಿನ ಹೆಸರಾಂತ ಸಾಹಿತಿ ದೇ. ಜವರೇಗೌಡರು ಸ್ವಾಮೀಜಿ ಜತೆ ನಡೆಸಿರುವ ಸಂದರ್ಶನದ ಯಥಾರೂಪ )
*ಸ್ವಾಮೀಜಿ, ಈ ಕ್ಷೇತ್ರ ಇಷ್ಟೊಂದು ವೈವಿಧ್ಯಮಯವಾಗಿ, ವಿಸ್ತಾರವಾಗಿ, ದೀನದಲಿತರಿಗೆ ಆಸರೆಯಾಗಿ, ವಿದ್ಯಾರ್ಥಿಗಳಿಗಡರ್ಪಾಗಿ ಬೆಳೆಯಬೇಕಾದರೆ ಮಠಕ್ಕೆ ಸಾಕಷ್ಟು ಆಸ್ತಿಯಿರಬೇಕು; ಇಲ್ಲವೆ ನಿಮ್ಮಲ್ಲಿ ಮಂತ್ರದಂಡವಿರಬೇಕು. ಇದಕ್ಕೆ ನೀವು ಏನು ಹೇಳುವಿರಿ?
-ಈ ಮಠಕ್ಕೆ ಭಕ್ತರೇ ಆಸ್ತಿ; ಈಶ್ವರ ಕೃಪೆಯೇ ಅಕ್ಷಯಪಾತ್ರೆ. ನಾನು ನಿಮಿತ್ತ ಮಾತ್ರ. ಅವನೊಲಿದರೆ ಕೊರಡೂ ಕೊನರುತ್ತದೆ. ಬಂಜರು ನೆಲ ಫಲವತ್ತಾಗುತ್ತದೆ. ತಪೋನಿಷ್ಠೆಯಿಂದ, ಕಾಯಕಮಾರ್ಗದಿಂದ ದುಡಿದರೆ ಈಶ್ವರ ತಾನಾಗಿಯೇ ಒಲಿಯುತ್ತಾನೆ.
`ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ, ಸದ್‌ಭಕ್ತರಿಗೆ ಎತ್ತನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು' ಎಂಬ ಆಯ್ದಕ್ಕಿ ಮಾರಯ್ಯನ ಹೆಂಡತಿ ಲಕ್ಕಮ್ಮನ ಮಾತು ನೀವು ಕೇಳಿಲ್ಲವೆ?

*ಅಂಥ ಸತ್ಯಶುದ್ಧ ಕಾಯಕದಿಂದ, ತಮ್ಮ ಅವಿರತಶ್ರಮದಿಂದ ಇಲ್ಲೊಂದು ಪವಾಡ ಸದೃಶ ಅದ್ಭುತ ನಡೆದಿದೆ ಎಂದು ಇಲ್ಲಿಗೆ ಬಂದವರೆಲ್ಲ ತಿಳಿಯುವುದರಲ್ಲಿ ತಪ್ಪೇನಿದೆ!
-ಅದೇ ತಪ್ಪು, `ಎನ್ನಿಂದಲೇ ಆಯಿತ್ತು, ಎನ್ನಿಂದಲೆ ಹೋಯಿತ್ತು ಎಂಬುವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ ಕೂಡಲಸಂಗಮದೇಔ?' `ಒಡೆಯರಿಗೊಡವೆಯನೊಪ್ಪಿಸುವುದೆ ನೇಮ' ಒಡೆಯರು ಯಾರು? ಶರಣರು, ದೀನ, ದರಿದ್ರರು.'
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವ ಕೂಡಲಸಂಗಮದೇವಾ.
ಯುಗಪುರುಷ ಬಸವೇಶ್ವರೇ ಹೀಗೆ ಹೇಳಿಕೊಳ್ಳುವಾಗ ನನ್ನ ಅಗ್ಗಳಿಕೆ ಏನಿದೆ? ಇಷ್ಟೆಲ್ಲ ಅಭಿವೃದ್ಧಿ ಹೇಗೆ ಆಯಿತೆಂಬುದೇ ನನಗೆ ಗೊತ್ತಿಲ್ಲ.

*ವೀರಶೈವ ಧರ್ಮವನ್ನು ಹಿಂದೂಧರ್ಮವೆಂದು ಕರೆಯಬಹುದೆ? ಶ್ರೀರಾಮಕೃಷ್ಣ ಸಂಸ್ಥೆ ಹಿಂದೂಧರ್ಮದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನ ಸಾಧುವೆ?
-ವೀರಶೈವಧರ್ಮ ಹಿಂದೂಧರ್ಮದ, ಅರ್ಥಾತ್ ಶೈವಧರ್ಮದ ಒಂದು ಶಾಖೆ, ದೈತಾದ್ವೈತ ವಿಶಿಷ್ಟಾದ್ವೈತ ಪಂಥಗಳಿದ್ದಂತೆ ಕ್ರೈಸ್ತರಲ್ಲಿ ಹಲವಾರು ಶಾಖೆಗಳಿದ್ದರೂ, ಎಲ್ಲರೂ ಕ್ರೈಸ್ತರಷ್ಟೆ. ಶಿವ, ಲಿಂಗ, ವಿಭೂತಿ ಮೊದಲಾದ ಕಲ್ಪನೆಗಳು ಹಿಂದೂಧರ್ಮದ ಜನಕುಕ್ಷಿಯಲ್ಲಿವೆ ಎಂಬುದನ್ನು ಮರೆಯಲಾಗದು. ವಿವಿಧಾನಗಳು ಭಿನ್ನವಾಗಿರಬಹುದು. ದೇವರು ಧ್ಯೇಯ ನಂಬಿಕೆಗಳೆಲ್ಲ ಒಂದೆ. ಲಿಂಗಾಯತ ಧರ್ಮವನ್ನು ಶಕ್ತಿವಿಶಿಷ್ಟಾದ್ವೈತ ಪಂಥವೆಂದೂ ಕರೆಯುವುದಂಟು. ಜೈನ, ಬೌದ್ಧ ಧರ್ಮಗಳನ್ನು ವಿಭಿನ್ನ ಮತಗಳೆಂದು ಕರೆಯುವುದಾದರೂ ಹಿಂದೂಧರ್ಮದ ಕಕ್ಷೆಯಿಂದ ಸಿಡಿದು ಹೊರಬಂದುವೆಂಬುದನ್ನು ಮರೆಯಲಾಗದು. ಶ್ರೀರಾಮಕೃಷ್ಣ ಪರಮಹಂಸರು ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ. ವೇದಾಂತ ಅವರ ಜೀವನದ ಹಾಸುಹೊಕ್ಕಾಗಿತ್ತು. ವಿವೇಕಾನಂದರು ಬದುಕಿದ್ದರೆ, ಹಿಂದೂಧರ್ಮದಿಂದ ಸಿಡಿದು ಹೋಗುವ ಪ್ರಯತ್ನವನ್ನು ತಡೆಗಟ್ಟುತ್ತಿದ್ದರೋ ಏನೊ?

*ಬಸವಣ್ಣ ಚೆನ್ನಬಸವಣ್ಣ ಮೊದಲಾದ ಹನ್ನೆರಡನೆಯ ಶತಮಾನದ ಶರಣರ ಉಪದೇಶವೇ ವೀರಶೈವ ಧರ್ಮದ ಅಡಿಗಲ್ಲಲ್ಲವೆ?
-ಸಂಶಯ ಬೇಕಿಲ್ಲ. ಅನುಭವ ಮಂಟಪ ಪ್ರಾಚೀನಕಾಲದ ಗ್ರೀಕರ ಅಕಾಡೆಮಿಯಂತಿತ್ತು. ನಾಡಿನ ನಾನಾ ಕಡೆಗಳಿಂದ ಬಂದ ಶರಣರು ಅಲ್ಲಿ ಸೇರಿ ಧರ್ಮ ಸಮಾಜಗಳಿಗೆ ಸಂಬಂಸಿದ ವಿಚಾರಗಳ ಮೇಲೆ ಚರ್ಚೆ ನಡೆಸುತ್ತಿದ್ದರು. ಸ್ತ್ರೀಯರು ಸಹ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಲವು ವಚನಗಳು ಅಲ್ಲಿ ನಡೆದ ಚರ್ಚೆಗಳ ಪರಿಣಾಮವಾಗಿ ಉದ್ಭವಿಸಿರಬೇಕೆಂದು ತೋರುತ್ತದೆ. ಎಲ್ಲೆಡೆಯೂ ರಾಜಷಾಯಿ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಪ್ರಜಾಪ್ರಭುತ್ವ ವಿಧಾನದಲ್ಲಿ, ಸ್ವತಂತ್ರ ವಾತಾವರಣದಲ್ಲಿ ಸಾಮೂಹಿಕ ಪ್ರಜ್ಞೆಯ ಪರಿಣಾಮವಾಗಿ ವೀರಶೈವ ಧರ್ಮ ರೂಪುಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ.

*ಇಂಡಿಯಾದಲ್ಲಿ ಸೆಕ್ಯೂಲರ್ ಸಿದ್ಧಾಂತ ಜಾರಿಯಲ್ಲಿದೆಯೆ?
-ರಾಜ್ಯಾಂಗದಲ್ಲಿ ಮಾತ್ರ ಅದು ಅಚ್ಚಾಗಿದೆ. ಯಾರೂ ಅದನ್ನನುಸರಿಸುತ್ತಿಲ್ಲ. ರಾಜಕೀಯದಲ್ಲಂತೂ ಜಾತಿಯ ಮೇಲ್ಗೈಯ್ಯಾಗಿದೆ.

*ಹಿಂದೂಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
- ಅದು ನಿಜಕ್ಕೂ ವಿಶಾಲವಾದ ಬುಡಭದ್ರವಾಗಿರುವ ಧರ್ಮ. ಬ್ರಾಹ್ಮಣ ಜಾತಿಯೊಡನೆ ಅದರ ಸಮೀಕರಣ ಸರಿಯಲ್ಲ. ಆರ್ಯದ್ರಾವಿಡ ದ್ರಾವಿಡಪೂರ್ವ ಜನಾಂಗಗಳ ವಿಚಾರಗಳು ಸೇರಿ ಆಗಿರುವ ಮುಖ್ಯವಾಗಿ ಉಪನಿಷತ್ತುಗಳ ಆಧಾರದ ಮೇಲೆ ನಲೆಸಿರುವ ಧರ್ಮ ಅದು. ಯಾರೋ ಒಬ್ಬ ವ್ಯಕ್ತಿ ಸರ್ವಾಕಾರ ಮನೋಭಾವದಿಂದ ಜನರ ಮೇಲೆ ಹೊರಿಸಿರುವ ವಿಚಾರಧಾರೆಯಲ್ಲ; ಕಾಲಕಾಲಕ್ಕೆ ಸಂತರು, ಋಷಿಗಳು, ಕೊನೆಗೆ ಕವಿಗಳು ತಂತಮ್ಮ ವಿಚಾರಧಾರೆಯನ್ನು ಹರಿಸಿ, ಚರ್ಚಿಸಿ ರೂಪುಗೊಂಡ, ವಿಕಾಸಗೊಂಡ ಸಾಮೂಹಿಕ ಧರ್ಮ. ವೀರಶೈವಧರ್ಮಕ್ಕೂ ಈ ಮಾತನ್ನು ಅನ್ವಯಿಸಬಹುದು. ಅದು ನಿಂತ ಮಡುವಲ್ಲ, ನಿರಂತರವಾಗಿ ಹರಿಯುತ್ತಿರುವ ಪ್ರವಾಹ.

*ಅನೇಕ ಧರ್ಮಗಳ ಸ್ಪರ್ಧೆ ನಡೆಯುತ್ತಿರುವ, ಸ್ವಾರ್ಥಪರ ರಾಜಕಾರಣಿಗಳು ಅಕಾರ ಲಾಲಸೆಯಿಂದ ದೇಶವನ್ನೇ ಅಡವಿರಲು ಸಿದ್ಧರಾಗಿರುವ, ಕುಟುಂಬ ಯೋಜನೆ ಕೆಲವರಿಗೆ ಮಾತ್ರವೇ ಅನ್ವಯವಾಗುತ್ತಿರುವ, ಮೂಲಭೂತವಾದ ಎಲ್ಲೆಲ್ಲೂ ತನ್ನ ರೆಕ್ಕೆಗಳನ್ನು ಹರಡುತ್ತಿರುವ ಈ ಕಾಲದಲ್ಲಿ ಹಿಂದೂಧರ್ಮಕ್ಕೆ ಅಪಾಯವಿದೆಯೆಂಬ ಶಂಕೆ ಕೆಲವರಲ್ಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಅನೇಕ ರಾಜಕಾರಣಿಗಳಿಗೆ ಹಿಂದೂಧರ್ಮದ ಜಾಯಮಾನವೇ ಗೊತ್ತಿಲ್ಲ. ಗೀತೋಪನಿಷತ್ತುಗಳನ್ನು, ವಚನಗಳನ್ನು, ಆಚಾರ್ಯರ ಕೃತಿಗಳನ್ನು ಓದಿಕೊಂಡಿಲ್ಲ. ಪರಧರ್ಮಿಯರಿಗಿಂತ ಮಿಗಿಲಾಗಿ ಅವರ ಅಜ್ಞಾನ ಬೇನಿಷ್ಠೆಗಳಿಂದಾಗಿ ಹಿಂದೂಧರ್ಮಕ್ಕೆ ಧಕ್ಕೆಯೊದಗಿದೆ. ಎಲ್ಲ ಧರ್ಮಗಳ ಗುರಿಯೊಂದೆಯಾಗಿರುವಾಗ, ಎಲ್ಲ ಧರ್ಮಗಳ ಪರಬ್ರಹ್ಮ ಕಲ್ಪನೆಯ ಹಾಗೂ ನೈತಿಕ ಮೌಲ್ಯಗಳ ಆಧಾರದ ಮೇಲೆ ನಿಂತಿರುವಾಗ ಮತೀಯ ಕಲಹಗಳು ಅನಾವಶ್ಯಕ. ಮತೀಯ ಕಲಹಗಳಲ್ಲಿ ತೊಡಗುವವರು ದೈವದ್ರೋಹಿಗಳೆಂದೇ ಹೇಳಬೇಕಾಗುತ್ತದೆ. ರಾಜಕಾರಣಿಗಳು ಏನೇ ಮಾಡಲಿ, ಹಿಂದೂಧರ್ಮವನ್ನು ನಾಶಪಡಿಸಲಾರರು. ಸಾವಿರಾರು ವರ್ಷ ಈ ದೇಶವನ್ನು ವಿದೇಶೀಯರು ಆಳಿದ್ದರೂ ಅದನ್ನು ಕೊಂಕಿಸಲಾಗಿಲ್ಲ. ಒಂದು ಮಾತು ಮಾತ್ರ ನಿಜ. ಹಿಂದೂಧರ್ಮ ಭರತಖಂಡ ವಿನಾ ಬೇರೆಡೆ ತನ್ನ ಬೇರು ಕೊಂಬೆಗಳನ್ನು ಪಸರಿಸಿಲ್ಲ. ಅದು ಇಲ್ಲಿ ಅಳಿಯಿತೆಂದರೆ, ಅದು ಮುಗಿದಂತೆಯೇ ಲೆಕ್ಕ. ಇಸ್ಲಾಂ ಮತ್ತು ಕ್ರೈಸ್ತಧರ್ಮಗಳು ಒಂದು ದೇಶದಲ್ಲಿ ನಿರ್ನಾಮಗೊಂಡರೂ ಬೇರೆ ದೇಶಗಳಲ್ಲಿ ವಿಜೃಂಭಿಸುತ್ತವೆ. ಏಕಮುಖ ಕುಟುಂಬ ಯೋಜನೆಯಾಗಲಿ, ಮೂಲಭೂತವಾದಿಗಳ ಅಂದೋಲನವಾಗಲಿ ಅಪಾಯಕಾರಿ.

*ಸ್ವಾತಂತ್ರ್ಯ ಸಮರದಲ್ಲಿ ನಿಮ್ಮ ಪಾತ್ರವೇನು? ಮಠಗಳು ಸ್ವಾತಂತ್ರ್ಯವನ್ನು ಸ್ವಾಗತಿಸುತ್ತಿದ್ದುದುಂಟೆ?
-ನನಗೆ ತಿಳಿದಮಟ್ಟಿಗೆ ಯಾವ ಮಠವೂ ಸ್ವಾತಂತ್ರ್ಯ ವಿರೋಯಾಗಿರಲಿಲ್ಲ. ನಮ್ಮ ಮಠ ಸ್ವಾತಂತ್ರ್ಯ ಸಮರದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಪರೋಕ್ಷವಾಗಿ ಸಹಾಯ ಮಾಡುತ್ತಿದ್ದುದುಂಟು. ಹೋರಾಟಗಾರರಿಗೆ ಎಲ್ಲ ಬಗೆಯ ಸಹಕಾರ ನೀಡುತ್ತಿತ್ತು.

*ಜಾತಿ ರಾಜಕೀಯಕ್ಕೆ ಮಠಗಳೂ ಕಾರಣ ಎನ್ನುವ ಮಾತಿದೆ. ಸಿದ್ಧಗಂಗೆಯ ಮಠದ ಬಗ್ಗೆಯೂ ಆ ಅಭಿಪ್ರಾಯವಿದೆಯಲ್ಲ? ಅದು ಸರಿಯೆ?
-ಸೂಕ್ಷ್ಮದ ಪ್ರಶ್ನೆ. ಕೆಲವು ಮಠಗಳ ಬಗ್ಗೆ ಆ ಮಾತು ನಿಜವಿರಬಹುದು, ಇಲ್ಲದಿರಬಹುದು. ಜನಾಭಿಪ್ರಾಯವನ್ನು ನಾನು ಸಂಪೂರ್ಣವಾಗಿ ನಿರಾಕರಿಸಲಾರೆ. ಆದರೆ ನಮ್ಮ ಮಠ ಎಂದೂ ರಾಜಕಾರಣದಲ್ಲಿ ಪ್ರವೇಶಿಸಿಲ್ಲ. ಈ ಮಠ ಕೇವಲ ಲಿಂಗಾಯತರಿಗೆ ಮಾತ್ರವೇ ಮುಡಿಪಲ್ಲ; ಎಲ್ಲ ಜಾತಿಯವರೂ ನಡೆದುಕೊಳ್ಳುತ್ತಾರೆ; ಎಲ್ಲ ಜಾತಿಯವರೂ ನೆರವು ನೀಡುತ್ತಾರೆ. ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ದಾಸೋಹ ಮಂದಿರದ ಬಾಗಿಲು ತೆರೆದಿದೆ. ಎಲ್ಲ ಜಾತಿಯ ರಾಜಕಾರಣಿಗಳೂ, ಶ್ರೀಮಠಕ್ಕೆ ಬರುತ್ತಾರೆ. ಎಲ್ಲರನ್ನು ಹರಸುವುದೇ ನಮ್ಮ ಕರ್ತವ್ಯ. ಪೂರ್ವಗ್ರಹವಾಗಲಿ, ನಿರಾಧಾರವಾದ ಸಂಶಯವಾಗಲಿ ಯಾರಿಗೂ ಒಳ್ಳೆಯದಲ್ಲ. ಸಂಶಯಾತ್ಮಾವಿನಶ್ಯತಿ.

*ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಗಾಂಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮವನ್ನು ಕಂಡವರಿಗೆ ತುಂಬ ನಿರಾಶೆಯಾಗುತ್ತದೆ. ಆ ತ್ಯಾಗ, ಆ ಬಲಿದಾನ, ಆ ಕಷ್ಟಸಹಿಷ್ಣುತೆ, ಆ ನೈತಿಕ ಶ್ರದ್ಧೆ, ಆ ಮೌಲ್ಯ, ನಿಷ್ಠೆ ಈಗೆಲ್ಲಿದೆ? ಗಾಂಜಿಯ ಅನುಯಾಯಿಗಳೇ ಅವರು ತೀರಿಕೊಂಡ ನಂತರ ದಾರಿಬಿಟ್ಟರು. ಗಾಂಜಿಯನ್ನು ನೋಡಿಲ್ಲದ, ಅವರ ಕೃತಿಗಳನ್ನರಿಯ ಈಗಿನ ರಾಜಕಾರಣಿಗಳಿಗೆ ಧರ್ಮದ ಭಯವೂ ಇಲ್ಲ, ನೈತಿಕ ಶ್ರದ್ಧೆಯೂ ಇಲ್ಲ. ಜಾತಿಯ ಮೇಲೆ ಜಾತಿಯನ್ನೆತ್ತಿ ಕಟ್ಟಿ, ವ್ಯಕ್ತಿಯ ಮೇಲೆ ವ್ಯಕ್ತಿಯನ್ನೆತ್ತಿಕಟ್ಟಿ, ಅಕಾರ ಗಿಟ್ಟಿಸುವುದೇ, ಸಮಾಜವನ್ನು ಸುಲಿದು ಹಣ ಗಳಿಸುವುದೇ ರಾಜಕಾರಣಿಗಳ ನಿತ್ಯಕರ್ಮವಾಗಿದೆ. ಎಲ್ಲೆಲ್ಲಿಯೂ ಭ್ರಷ್ಟಾಚಾರ, ಅತ್ಯಾಚಾರ, ಅಪಪ್ರಚಾರಗಳು ನಗ್ನ ನೃತ್ಯದಲ್ಲಿ ತೊಡಗಿವೆ. ಗಾಂಜಿ ಇನ್ನೂ ಹತ್ತು ವರ್ಷ ಬದುಕಿದ್ದರೆ, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಕನಿಷ್ಠ ಹತ್ತು ವರ್ಷ ರಾಜ್ಯಭಾರ ನಡೆಸಿದ್ದರೆ ಇಂಡಿಯಾ ದೇಶದ ಪರಿಸ್ಥಿತಿಯೇ ಬದಲಾಗುತ್ತಿತ್ತು. ಭೂಮಿಯ ಮೇಲೆ ಜನ್ಮಧಾರಣೆ ಮಾಡುವುದು ಬರಿಯ ಕಲಹಕ್ಕಲ್ಲ. ಭೂಮಿ ನೀಡುವ ಸಕಲ ಸೌಕರ್ಯಗಳ ಸುಖವನ್ನನುಭವಿಸುತ್ತ ಪುಣ್ಯಕಾರ್ಯಗಳನ್ನೆಸಗುತ್ತ ಇಲ್ಲಿಯೇ ದೇವರರಾಜ್ಯವನ್ನು ಸಂಪಾದಿಸುವುದಕ್ಕೆಂಬುದನ್ನು ಮನುಷ್ಯ ಅರಿಯಬೇಕು. ಸಹನೆ, ಸಂಯಮ, ವಿವೇಕ, ತ್ಯಾಗ, ನೈತಿಕ ವರ್ತನೆಯ ಮೂಲಕ ಭಗವಂ ದಾನಮಾಡಿರುವ ಭೂಮಿಯನ್ನು ಸ್ವರ್ಗಗೊಳಿಸಬೇಕೇ ಹೊರತು, ಮಾನವ ರಾಕ್ಷಸೀಪ್ರವೃತ್ತಿಯಿಂದ ನರಕಗೊಳಿಸಬಾರದು.

*ಭ್ರಷ್ಟ ರಾಜಕಾರಣಿಗಳಿಂದ ದೇಶ ಅವನತಿಮುಖವಾಗಿರುವ ಕಾಲದಲಿ ಮಠಗಳ ಪಾತ್ರವೇನು?
-ಮೊದಲನೆಯದಾಗಿ ಮಠಗಳು ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕೇಂದ್ರಗಳು. ರಾಜಕೀಯಸಗಣಿಯಲ್ಲಿ ತೊಡಗಿಕೊಂಡ ಮಠಗಳು ಅಧ್ಯಾತ್ಮಿಕ ಕೇಂದ್ರಗಳಾಗಿ ಉಳಿಯುವುದಿಲ್ಲ. ದೇಶದ ಸಮಾಜದ ಹಿತದೃಷ್ಟಿಯಿಂದ ಮಠಗಳು ಬೀದಿಗಿಳಿಯಬಾರದು. ಅಂದಮೇಲೆ ಭ್ರಷ್ಟಾಚಾರವನ್ನು, ನೈತಿಕ ಪತನವನ್ನು ನೋಡಿಕೊಂಡು ತೆಪ್ಪಗಿರಲಾಗದು. ರಚನಾತ್ಮಕ ಕಾರ್ಯಕ್ರಮಗಳ ಮೂಲಕ, ಉತ್ಸವಗಳ ಮೂಲಕ, ಯುವಕರ ಶಿಕ್ಷಣದ ಮೂಲಕ, ಭಾಷಣ, ಪ್ರವಚನಗಳ ಮೂಲಕ, ವಿಶೇಷವಾಗಿ ಧ್ಯಾನ ಪ್ರಾರ್ಥನೆಗಳ ಮೂಲಕ ಮಾಡಬಹುದೆಂಬ ವಿಶ್ವಾಸ ನನಗಿದೆ.

*ವೈಜ್ಞಾನಿಕ ಯುಗದಲ್ಲಿ ಮತಗಳ ಮತ್ತು ಮತೀಯ ಆಚರಣೆಗಳ ಪಾತ್ರವೇನು?
-ಮೂಲಭೂತ ಸತ್ವನಿಷ್ಠ ತತ್ತ್ವಗಳಿಗೆ ತಿಲಾಂಜಲಿ ನೀಡದೆ ವೈಜ್ಞಾನಿಕ ಮನೋಧರ್ಮವನ್ನೂ ವೈಚಾರಿಕ ಬುದ್ಧಿಯನ್ನೂ ಬೆಳೆಸಿಕೊಳ್ಳಬೇಕಾದ್ದು, ವಿ ನಿಷೇಧ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕಾದ್ದು ಎಲ್ಲ ಮತಗಳ ಗುರಿಯಾಗಿರಬೇಕು. ಬದಲಾವಣೆ ಜೀವಂತಿಕೆಯ ಲಕ್ಷಣ.

*ಗಾಂಜಿ ವರ್ಣಾಶ್ರಮಧರ್ಮದ ಬಗ್ಗೆ ರಾಜಿಮಾಡಿಕೊಂಡದ್ದು ಸರಿಯೆ?
-ರಾಜತಂತ್ರದ ದೃಷ್ಟಿಯಿಂದ ಆ ಕಾಲಕ್ಕೆ ಅದು ಅವಶ್ಯವಾಗಿದ್ದಿರಬಹುದು. ಅವರಿಗೆ ಮುಖ್ಯವಾಗಿದ್ದದ್ದು ಸ್ವಾತಂತ್ರ್ಯ ಸಂಪಾದನೆ.

*ಮಠ, ಮತಗಳು ರಾಷ್ಟ್ರದ ಐಕ್ಯಕ್ಕೆ ಭಂಗಕಾರಿಗಳಲ್ಲವೆ?
- ಮೂಲಭೂತವಾದ ಹಾನಿಕಾರಕ ನಿಜ. ಮಠ, ಮತಗಳಲ್ಲಿ ತಪ್ಪು ಹುಡುಕುವುದಕ್ಕಿಂತ ಅವುಗಳ ಜವಾಬ್ದಾರಿ ಹೊತ್ತಿರುವ ಜನರನ್ನ ಕೇಳಬೇಕು. ಒಂದು ರಾಷ್ಟ್ರದ ಐಕ್ಯಕ್ಕೆ ಭಂಗವುಂಟುಮಾಡಬೇಕೆಂದು ಯಾವ ಧರ್ಮದ ಶಾಸ್ತ್ರವೂ ಹೇಳಿಲ್ಲ. ಅದೆಲ್ಲ ದುರಾಶಾಪೀಡಿತ ನೀತಿಭ್ರಷ್ಟರ ಗೈಮೆ.

*ದೇಶದ ಸಮಸ್ಯೆಗಳಿಗೆ ಪರಿಹಾರವೇನು? ಶಿಕ್ಷಣ ಮಂದಿರಗಳಲ್ಲಿಯೂ ಶೋಷಣೆ ನಡೆಯುತ್ತಿರುವುದು ಸರಿಯೆ?
-ಜನಜಾಗೃತಿಯೊಂದೇ ಪರಿಹಾರ. ಅದು ಸಾಧ್ಯವಾಗಬೇಕಾದರೆ ಜಾತಿ, ಲಿಂಗ, ವಯೋಭೇದವಿಲ್ಲದೆ ಎಲ್ಲರೂ ವಿದ್ಯಾವಂತರಾಗಬೇಕು. ಬಡವರಿಗೂ ನಿಲುಕುವ ಶಿಕ್ಷಣವನ್ನು ವ್ಯವಸ್ಥೆಗೊಳಿಸಬೇಕು. ಶಿಕ್ಷಣ ಮಂದಿರಗಳಾಗಲಿ, ದೇವಮಂದಿರಗಳಾಗಲಿ ಸುಲಿಗೆಯ ಅಂಗಡಿಗಳಾಗಬಾರದು.

*ಮಠಗಳು ಕಾರ್ಖಾನೆಗಳ ಸ್ಥಾಪನೆಯಲ್ಲಿ, ಪತ್ರಿಕಾ ಹವ್ಯಾಸದಲ್ಲಿ ತೊಡಗಬಹುದೆ? ಸಿದ್ಧಗಂಗಾ ಸಿಮೆಂಟ್ ಫ್ಯಾಕ್ಟರಿ, ಲೋಕವಾಣಿ ಪತ್ರಿಕೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಮಠಗಳ ಹುಟ್ಟುವಳಿ ಹೆಚ್ಚುವುದಾದರೆ, ಆ ಆದಾಯ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗವಾಗುವುದಾದರೆ, ಅದರಿಂದಾಗಿ ಪೂರ್ಣವಾಗಿ ರೂಢಿಸದಿರುವುದೂ, ಅದರ ಪೂರ್ಣ ಪ್ರಯೋಜನವನ್ನು ಪಡೆಯದಿರುವುದೂ ದೇಶದ್ರೋಹವಾಗುತ್ತದೆ. ನೀರಾವರಿಯಾಗುವ ಗದ್ದೆಯನ್ನು ಪಾಳುಗೆಡಹುವುದರಿಂದ ದೇಶಕ್ಕೆ ನಷ್ಟವಾಗುವುದಿಲ್ಲವೆ? ಸಿದ್ಧಗಂಗಾ ಸಿಮೆಂಟ್ ಕಾರ್ಖಾನೆಯಿಂದ ಬರಬಹುದಾದ ಲಾಭದಿಂದ ಮಠದ ಕಾರ್ಯಕ್ಷೇತ್ರವನ್ನು ವಿಸ್ತರಿಸಬಹುದೆಂಬ ಯೋಚನೆಯಿಂದ ಶೇಕಡ ಅರವತ್ತು ಭಾಗ ಷೇರುಗಳನ್ನು ಪಡೆದದ್ದಾಯಿತು. ಆ ಬಗ್ಗೆ ಸಲಹೆ ನೀಡಿದವರೂ ಭಕ್ತರೇ. ಮಠವನ್ನು ನಡೆಸುವವರು ಭಕ್ತರು ತಾನೇ. ಅವರ ಮಾತನ್ನು ಕೇಳದಿರುವುದೆಂತು? ದಾಸೋಹ ಕಾರ್ಯಕ್ಕಾಗಿ ನಾನು ಪಟ್ಟ ಪಡುಪಾಟಿಲು ಅಷ್ಟಿಷ್ಟಲ್ಲ. ಅದು ನಿರ್ವಿಘ್ನವಾಗಿ ನಡೆಯಲೆಂಬ ದೃಷ್ಟಿಯಿಂದ ಆ ಸಾಹಸಕ್ಕೆ ಕೈ ಹಾಕಿದ್ದಾಯಿತು. ಕಾರ್ಖಾನೆ ಸರಿಯಾಗಿ ನಡೆಯಲಿಲ್ಲ ನಷ್ಟವಾಯಿತು, ಬಿಟ್ಟಿದ್ದೂ ಆಯಿತು.

ಲೋಕವಾಣಿ ಪತ್ರಿಕೆಗೆ ಕೈ ಹಾಕಬಾರದಿತ್ತೇನೋ ಎಂದು ಈಗನ್ನಿಸುತ್ತದೆ. ಇಲ್ಲಿಯೂ ಅಷ್ಟೇ. ವೀರೇಂದ್ರ ಪಾಟೀಲರಂಥ ಸಜ್ಜನ ರಾಜಕಾರಣಿಗಳು ಮತ್ತು ಭಕ್ತರು ಬಂದು ಒತ್ತಾಯ ಪಡಿಸಿದರು. ಪತ್ರಿಕೆ ರಾಜ್ಯದ ನಾಲ್ಕನೆಯ ಆಯಾಮ ಅಥವಾ ಆಧಾರಸ್ತಂಭವಾಗಿರುವಾಗ, ದೇಶದ ಗತಿಪ್ರಗತಿಗಳು ಒಳ್ಳೆಯ ಪತ್ರಿಕೆಯನ್ನವಲಂಬಿಸಬೇಕಾಗಿರುವುದರಿಂದ, ನಿಷ್ಪಕ್ಷಪಾತ ದೃಷ್ಟಿಯ ಸತ್ಯನಿಷ್ಠೆಯ ಪ್ರಾಮಾಣಿಕತೆಯ ಆದರ್ಶ ರೀತಿಯ ಪತ್ರಿಕೆಯ ಅಗತ್ಯವಿದೆಯೆಂದು ಮಿತ್ರರು ಹೇಳಿದರು. ಭಕ್ತರ ಮಾತನ್ನು ನಿರಾಕರಿಸುವುದು ಕಷ್ಟ. ಅದರಲ್ಲಿಯೂ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮಠವನ್ನು ನಡೆಸುತ್ತಿರುವಾಗ ಅದು ನಿಂತುಹೋಯಿತೇ ಹೊರತು ಮಠಕ್ಕೇನೂ ನಷ್ಟವಾಗಲಿಲ್ಲ. ತೇನ ವಿನಾ ತೃಣಮಪಿ ನ ಚಲತಿ.

* ಒಮ್ಮೆ ಶ್ರೀ ನಿಜಲಿಂಗಪ್ಪನವರು ಅನೇಕ ಸ್ವಾಮಿಗಳಿದ್ದ ಸಭೆಯಲ್ಲಿ ಭಾಷಣ ಮಾಡುತ್ತ ಬಂಧುಗಳನ್ನು ಉತ್ತರಾಕಾರಿಗಳನ್ನು ನೇಮಿಸಬಾರದೆಂದು ಹೇಳಿದರು. ಸಲಹೆ ನಿಮಗೆ ಸಮ್ಮತವೆ?
-ಖಂಡಿತ. ಆ ಬಗ್ಗೆ ಸಂದೇಹವೇ ಇಲ್ಲ.

*ದಿನೇ ದಿನೆ ಹೊಸ ಹೊಸ ಮಠಗಳು ಹುಟ್ಟಿಕೊಳ್ಳುತ್ತವೆ. ಸ್ವಾಮಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಿಂದ ಪ್ರಯೋಜನವಾಗುತ್ತದೆಯೆ?
-ಅಧ್ಯಾತ್ಮ ಸಾಧನೆ, ಸಮಾಜಸೇವೆಗಾಗಿ ತಲೆಯೆತ್ತುವ ಮಠಗಳಿಗೆ ಮತ್ತು ಸ್ವಾಮಿಗಳಿಗೆ ಸ್ವಾಗತವುಂಟು. ಪ್ರಜೆಗಳಂತೋ ಅಂಥ ನಾಯಕರು; ಭಕ್ರರಂತೋ ಅಂಥ ಸ್ವಾಮಿಗಳು ದೊರೆಕೊಳ್ಳುತ್ತಾರೆ. ಸಾಮಾನ್ಯ ಜನರಿಗಿಂತ ಹೆಚ್ಚಿನ ಸೌಕರ್ಯ, ಸೌಲಭ್ಯಗಳನ್ನು ಸ್ವಾಮಿಗಳಾಗಲಿ, ನಾಯಕರಾಗಲಿ ಅಪೇಕ್ಷಿಸಬಾರದು.

*ಅಡ್ಡಪಲ್ಲಕ್ಕಿ ಚಿನ್ನದ ಕಿರೀಟಗಳನ್ನು ನೀವು ಬಳಸುತ್ತಿಲ್ಲವಲ್ಲ. ಅವು ಮಠಾಪತಿಗಳಿಗೆ ಭೂಷಣವಲ್ಲವೆ? ಜನಾಕರ್ಷಣೆಗೆ ಅವು ಅವಶ್ಯಕವಲ್ಲವೆ?
-ನಮ್ಮ ನಡತೆಯ ಮೂಲಕ, ನಾವು ಮಾಡುವ ಕೆಲಸದ ಮೂಲಕ, ನಮ್ಮ ತಪಶ್ಚರ್ಯೆಯ ಮೂಲಕ, ನಮ್ಮ ಸೇವೆಯ ಮೂಲಕ, ಪ್ರೀತಿಯ ಮೂಲಕ, ವಿದ್ವತ್ತಿನ ಮೂಲಕ ಭಕ್ತರನ್ನು ಆಕರ್ಷಿಸಬೇಕೇ ಹೊರತು ವೇಷಭೂಷಣಗಳಿಂದಲ್ಲ. ನಿಜವಾದ ಸನ್ಯಾಸಿಗೆ ಅವು ಅನಗತ್ಯ. ಆಡಂಬರವಂತೂ ಕೂಡದು. ಅದು ಸನ್ಯಾಸಿಧರ್ಮಕ್ಕೆ ವಿರುದ್ಧವಾದದ್ದು. ಗುರು ಭಕ್ತರ ನಡುವೆ ಆಡಂಬರದ ಸಂಗತಿಗಳು ಕೊಲೆಬಸವನ ವೇಷಭೂಷಣಗಳು ಅಡ್ಡಬರಬಾರದು. ಸ್ವಾಮಿ ವಿವೇಕಾನಂದರು ನಹುಷನಂತೆ ಪಲ್ಲಕ್ಕಿಯಲ್ಲಿ ಹೊರಿಸಿಕೊಳ್ಳುತ್ತಿದ್ದರೆ? ಅವರಿಗೆ ಚಿನ್ನದ ಕಿರೀಟವಿತ್ತೆ? ಅವಿಲ್ಲದೆ ಜನರ ವಿಶ್ವಾಸವನ್ನು ಸಂಪಾದಿಸುವುದೆ ಮಹತ್ತರ ಸಾಧನೆ.

*ನೀವು ವಿದೇಶಕ್ಕೆ ಹೋಗಿದ್ದೀರಾ?
-ಇಲ್ಲ, ನಾನು ಸಾಮಾನ್ಯವಾಗಿ ಕುಟೀಚಕನೆ ಹೊರತು ಬಹೂದಕನಲ್ಲ. ವಿದೇಶಗಳಿಗೆ ಹೋಗುವುದಿರಲಿ, ಇಂಡಿಯಾ ದೇಶದಲ್ಲಿ ಮದ್ರಾಸ್, ಮುಂಬಯಿಗಳಂಥ ಒಂದೆರಡು ಪಟ್ಟಣಗಳನ್ನು ಬಿಟ್ಟು ಕರ್ನಾಟಕದ ಹೊರಗೆ ನಾನು ಹೋಗಿಯೇ ಇಲ್ಲ. ಹೋಗಬೇಕೆಂಬ ಇಚ್ಛೆಯೂ ಇಲ್ಲ. ಇಲ್ಲಿಯೇ ಕೈತುಂಬ ಕೆಲಸವಿರುವಾಗ ದಾಸೋಹ ವ್ಯವಸ್ಥೆಯೇ ನನ್ನ ಸಮಯವನ್ನೆಲ್ಲ ನುಂಗಿಕೊಳ್ಳುತ್ತಿರುವಾಗ ನಾನು ಹೊರಗೆ ಹೋಗುವ ಮಾತೇ ಇಲ್ಲ. ಮೇಲಾಗಿ ನನ್ನ ಮೋಜಿಗಾಗಿ ಮಠದ ಹಣವನ್ನು ವ್ಯಯಮಾಡಲಾರೆ.


ಕೃಪೆ :- ಮಹಾತಪಸ್ವಿ ಪುಸ್ತಕದಿಂದ

No comments: